ಅಂಕೋಲಾ ತಾಲೂಕಿನ ಅರ್ಬನ್ ಕೋ-ಆಪ್ ಬ್ಯಾಂಕ್ ಸಭಾಭವನದಲ್ಲಿ ರವಿವಾರದಂದು ಪಡ್ತಿ ಸಮಾಜ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿ ಸಂಘ ಅಂಕೋಲಾ-ಕುಮಟಾದ 22ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಸಿರ್ಸಿ ಪಡ್ತಿ ಸಮಾಜದ ಅಧ್ಯಕ್ಷರಾದ ಶ್ರೀ ಕೃಷ್ಣ ಪೊಕ್ಕಾ ಗಾಂವಕರ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಂಘದ ಸದ್ಯದ ಕಾರ್ಯವೈಖರಿ ಮತ್ತು ಬೆಳವಣಿಗೆಯ ಬಗ್ಗೆ ಅತ್ಯಂತ ಸಂತೋಷ ವ್ಯಕ್ತಪಡಿಸಿದರು. ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಮಕ್ಕಳಲ್ಲಿ ಹೊಸ ಚೈತನ್ಯ ಮತ್ತು ಸ್ಫೂರ್ತಿಯನ್ನು ತುಂಬುತ್ತವೆ ಎಂದು ಅಭಿಪ್ರಾಯಪಟ್ಟ ಅವರು, ಇಂತಹ ಸಮಾಜಮುಖಿ ಕಾರ್ಯಕ್ರಮಗಳು ತಾಲೂಕಿನ ಎಲ್ಲಾ ಭಾಗಗಳಲ್ಲೂ ನಿರಂತರವಾಗಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಶ್ರೀಮತಿ ಸುಹಾಸಿನಿ ಮನೋಹರ್ ಗಾಂವಕರ ಅವರು ಮಾತನಾಡಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಉತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಒಂದು ಅತ್ಯುತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದರು. ಸಮಾಜದ ಪ್ರತಿಯೊಬ್ಬ ತಂದೆ-ತಾಯಂದಿರು ತಮ್ಮ ಮಕ್ಕಳಲ್ಲಿ ಸರಳ ಜೀವನದ ಮೌಲ್ಯಗಳನ್ನು ಬೆಳೆಸಬೇಕು ಮತ್ತು ಅವರ ವಿದ್ಯಾಭ್ಯಾಸದ ಪ್ರಗತಿಯ ಕಡೆಗೆ ಹೆಚ್ಚಿನ ಒತ್ತು ನೀಡಿ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು.
ಮತ್ತೊಬ್ಬ ಮುಖ್ಯ ಅತಿಥಿ, ಬೆಳಸೆಯ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲರಾದ ಶ್ರೀ ಅಶೋಕ ಡಿ. ಗಾಂವಕರ ಅವರು ಮಾತನಾಡಿ, ಸಮಾಜದ ಯುವಕರು ಯಾವುದೇ ರೀತಿಯ ಹಿಂಜರಿಕೆಯಿಂದ ದೂರ ಸರಿದು, ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಕೈಜೋಡಿಸಿ ಸಹಕಾರ ನೀಡಬೇಕು ಎಂದರು. ಪಡ್ತಿ ಸಮಾಜದ ಪ್ರತಿಯೊಬ್ಬ ಸದಸ್ಯರೂ ಸಹ ಸಂಘವು ಮತ್ತಷ್ಟು ಎತ್ತರಕ್ಕೆ ಬೆಳೆಯಲು ತನು, ಮನ ಹಾಗೂ ಧನದಿಂದ ಸಹಕರಿಸಬೇಕೆಂದು ವಿನಂತಿಸಿದ ಅವರು, ತಾವು ಕೂಡ ಸಮಾಜದ ಏಳಿಗೆಗಾಗಿ ಸದಾ ಕಾಲ ಶ್ರಮಿಸುವುದಾಗಿ ಭರವಸೆ ನೀಡಿದರು.
ಪುರಸಭೆಯ ಮಾಜಿ ಸದಸ್ಯರಾದ ಶ್ರೀಮತಿ ರೇಖಾ ದಿನಕರ ಗಾಂವಕರ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ನಿವೃತ್ತ ಎ.ಎಸ್.ಐ ಶ್ರೀ ನಿರಂಜನ ಜಿ. ಪಡ್ತಿ ಅವರು ಮಾತನಾಡಿ, ಪಾಲಕರು ತಮ್ಮ ಮಕ್ಕಳ ಉಜ್ವಲ ಮತ್ತು ಸುಂದರ ಭವಿಷ್ಯಕ್ಕಾಗಿ ಸದಾ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡ್ತಿ ಸಮಾಜ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ದಾಮು ಎನ್. ಪಡ್ತಿ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಅವರು, ನಮ್ಮ ಪಡ್ತಿ ಸಮಾಜವು ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹಳ ಹಿಂದುಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಮಾಜದ ಯುವಕರು ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಮುಂದಾಗಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಮತ್ತು ಒಮ್ಮತದಿಂದ ಸಹಕಾರ ನೀಡಿದರೆ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಒಗ್ಗಟ್ಟಿನ ಕರೆ ನೀಡಿದರು.ಇದೇ ವೇದಿಕೆಯಲ್ಲಿ 7ನೇ ತರಗತಿಯಿಂದ ಪದವಿಯವರೆಗೆ ಅತ್ಯುತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.
ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪ್ರಕ್ರಿಯೆಯನ್ನು ಸಂಘದ ಕಾರ್ಯದರ್ಶಿಗಳಾದ ಶ್ರೀ ಮನೋಹರ ಡಿ. ಗಾಂವಕರ ಅವರು ನೆರವೇರಿಸಿಕೊಟ್ಟರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಮಾಜದ ಬಾಂಧವರಾದ ಶ್ರೀ ಕೃಷ್ಣ ಪೊಕ್ಕ ಗಾಂವಕರ, ಶ್ರೀ ನಾಗೇಶ ಡಿ. ಗಾಂವಕರ, ಶ್ರೀ ಗುಣವಂತ ಅನಂತ ಗಾಂವಕರ, ಶ್ರೀ ಸುರೇಶ ತುಕಾರಾಮ ತಳೇಕರ, ಶ್ರೀ ನಿರಂಜನ್ ಜಿ. ಪಡ್ತಿ, ಶ್ರೀ ಸುರೇಶ ನಾಗಪ್ಪ ಗಾಂವಕರ, ಶ್ರೀ ರಾಜು ಥಾಕು ಗಾಂವಕರ, ಶ್ರೀ ರಾಜು ನಾರಾಯಣ ಪಡ್ತಿ ಮತ್ತು ಶ್ರೀ ಶಾಂತಾ ನುನಾ ಗಾಂವಕರ ಅವರಿಗೆ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಕಾರ್ಯಕ್ರಮದಲ್ಲಿ ಅಂಕೋಲಾದ ಸಿವಿಲ್ ಹೆಡ್ ಕಾನ್ಸ್ಟೇಬಲ್ ಶ್ರೀ ಪ್ರೇಮಾನಂದ ರಾಮಾ ಗಾಂವಕರ, ಪೂಜಗೇರಿಯ ಊರಿನ ಗಣ್ಯರಾದ ಶ್ರೀ ಕೃಷ್ಣ ಬೀರಪ್ಪ ಗಾಂವಕರ, ಹಿರೇಗುತ್ತಿಯ ಉದ್ಯಮಿ ಶ್ರೀ ರಮಕಾಂತ ರಾಮಚಂದ್ರ ಗಾಂವಕರ, ಶ್ರೀ ಗುರು ನಾಗಪ್ಪ ಗಾಂವಕರ ಹಾಗೂ ಶ್ರೀ ಪ್ರದೀಪ್ ಕೋಠರಕಾರ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕುಮಾರಿ ಅನುಷಾ ನಾಗೇಶ್ ಗಾಂವಕರ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಆರಂಭವಾಯಿತು.
ಸಂಘದ ಕಾರ್ಯದರ್ಶಿಯಾದ ಶ್ರೀ ಮನೋಹರ ಡಿ. ಗಾಂವಕರ ಅವರು ವಾರ್ಷಿಕ ವರದಿ ವಾಚನ ಮಾಡಿದರು. ಶ್ರೀ ನಾಗೇಶ ಆರ್. ಗಾಂವಕರ ಅವರು ಸಮಗ್ರ ಕಾರ್ಯಕ್ರಮದ ನಿರೂಪಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸಂಘದ ಸದಸ್ಯರಾದ ಶ್ರೀ ಸಂತೋಷ ಎನ್. ತಳೇಕರ ಅವರು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
ಈ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಗಂಗಾಧರ ಎಫ್. ಗಾಂವಕರ, ಸದಸ್ಯರಾದ ಶ್ರೀ ಸಂತೋಷ ಸಿ. ತಳೇಕರ, ಶ್ರೀಮತಿ ಸಂಧ್ಯಾ ಎಂ. ಗಾಂವಕರ, ಶ್ರೀ ನಾಗರಾಜ ಸುಬ್ರಾಯ ಪಡ್ತಿ, ಶ್ರೀ ನಾಗರಾಜ ರಾಮ ಪಡ್ತಿ, ಶ್ರೀ ಚಂದ್ರಶೇಖರ ಮಾದೇವ ಗಾಂವಕರ, ಶ್ರೀ ಮಾಣಿರಾಜ ಶ್ರೀಪಾದ ಗಾಂವಕರ, ಶ್ರೀ ಗಣೇಶ ರಾಮಚಂದ್ರ ಪಡ್ತಿ, ಶ್ರೀ ರಾಘವೇಂದ್ರ ಎಸ್. ಪಡ್ತಿ, ಶ್ರೀ ರವೀಂದ್ರ ಆರ್. ಗಾಂವಕರ ಸೇರಿದಂತೆ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಅಂಕೋಲಾ ಮತ್ತು ಕುಮಟಾ ತಾಲೂಕಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಮಾಜದ ನೂರಾರು ಹಿತಚಿಂತಕರು ಮತ್ತು ಬಂಧುಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.













Leave a Reply