ಅಂಕೋಲಾ: ನೀರಿನ ವಿವಾದಕ್ಕೆ ಪೂಜಗೇರಿಯಲ್ಲಿ ಮಾರಾಮಾರಿ ; ಚಾಲಕ ಹಾಗೂ ಸ್ಥಳೀಯರ ನಡುವೆ ಪರಸ್ಪರ ದೂರು ದಾಖಲು.​

ಅಂಕೋಲಾ: ತಾಲೂಕಿನ ಪೂಜಗೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ನಿಲ್ಲಿಸುವ ಸಣ್ಣ ವಿಚಾರವಾಗಿ ಶುರುವಾದ ಮಾತಿನ ಚಕಮಕಿ ನಂತರ ಮಾರಾಮಾರಿ ನಡೆದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು-ಪ್ರತಿದೂರು ದಾಖಲಾಗಿದೆ. ದಿನಾಂಕ 12-05-2026 ರಂದು ಸಾಯಂಕಾಲ ಸುಮಾರು 4:00 ರಿಂದ 4:30ರ ಅವಧಿಯಲ್ಲಿ ನಡೆದ ಈ ಘಟನೆಯು ಇಡೀ ಪೂಜಗೇರಿ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.​

ಟ್ಯಾಂಕರ್ ಚಾಲಕ ಕಿಶೋರ ನಾಯಕ ನೀಡಿದ ದೂರಿನ ಸಾರಾಂಶ:​ಚಾಲಕ ಕಿಶೋರ ಅವರು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾಗ ಸ್ಥಳೀಯ ನಿವಾಸಿ ರಮಾಕಾಂತ ಗಾಂವಕರ ಅವರು ಟ್ಯಾಂಕರ್ ಅನ್ನು ತಮ್ಮ ಮನೆಯ ಹತ್ತಿರವೇ ತಂದು ನೀರು ಹಾಕುವಂತೆ ಒತ್ತಾಯಿಸಿದ್ದರು. ಆದರೆ ರಸ್ತೆಯ ಇಕ್ಕಟ್ಟಿನಿಂದಾಗಿ ಅಲ್ಲಿಗೆ ಟ್ಯಾಂಕರ್ ತರಲು ಸಾಧ್ಯವಿಲ್ಲ ಎಂದು ಚಾಲಕ ನಿರಾಕರಿಸಿದ್ದೇ ಈ ಸಂಘರ್ಷಕ್ಕೆ ಮೂಲ ಕಾರಣವಾಗಿದೆ. ಈ ವೇಳೆ ಆರೋಪಿ ರಮಾಕಾಂತ ಗಾಂವಕರ ಮತ್ತು ಅವರ ಮಕ್ಕಳು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಮತ್ತು ವಿಘ್ನೇಶ ಎಂಬಾತ ಕಾಲಿನಿಂದ ಮುಖಕ್ಕೆ ಜೋರಾಗಿ ಒದ್ದ ಪರಿಣಾಮ ತಮ್ಮ ಮುಂಭಾಗದ ಮೂರು ಹಲ್ಲುಗಳು ಸ್ಥಳದಲ್ಲೇ ಮುರಿದು ಬಿದ್ದಿವೆ ಎಂದು ಚಾಲಕ ದೂರಿನಲ್ಲಿ ವಿವರಿಸಿದ್ದಾರೆ. ಈ ಸಂಬಂಧ ರಮಾಕಾಂತ ಕುಟುಂಬದ ವಿರುದ್ಧ ಅಂಕೋಲಾ ಠಾಣೆಯಲ್ಲಿ BNS ಸೆಕ್ಷನ್ 115(2), 118 ಹಾಗೂ 351(2) ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.​

ಸಂಧ್ಯಾ ರಮಾಕಾಂತ ಗಾಂವಕರ ನೀಡಿದ ಕೌಂಟರ್ ದೂರಿನ ಸಾರಾಂಶ:​ಇನ್ನೊಂದೆಡೆ ಸಂಧ್ಯಾ ಅವರು ನೀಡಿದ ದೂರಿನಲ್ಲಿ, ತಮ್ಮ ಮನೆ ಹತ್ತಿರ ನೀರು ನೀಡುವಂತೆ ಕೇಳಲು ಹೋದಾಗ ಚಾಲಕ ಕಿಶೋರ ನಾಯಕನು ಅವಾಚ್ಯ ಶಬ್ದಗಳಿಂದ ಬೈದು, ಮೊದಲು ತಮ್ಮ ಪತಿ ರಮಾಕಾಂತ ಅವರ ಎದೆಗೆ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದಾಗ ಚಾಲಕನು ತಮ್ಮ ಮುಖಕ್ಕೂ ಹೊಡೆದು, ತಾವು ಧರಿಸಿದ್ದ ಬಟ್ಟೆಯನ್ನು ಎಳೆದಾಡಿ ಒಬ್ಬ ಮಹಿಳೆಯ ಮಾನಕ್ಕೆ ಕುಂದು ಉಂಟುಮಾಡುವ ರೀತಿಯಲ್ಲಿ ವರ್ತಿಸಿದ್ದಾನೆ ಎಂಬ ಆಘಾತಕಾರಿ ದೂರನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಸ್ಥಳಕ್ಕೆ ಬಂದ ಚಾಲಕನ ಮಗನು ಕತ್ತಿ ತೋರಿಸಿ ತಮಗೆ ಜೀವಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದ್ದು, ಪೊಲೀಸರು ಚಾಲಕ ಮತ್ತು ಆತನ ಮಗನ ವಿರುದ್ಧ BNS Section 74 ಸೇರಿದಂತೆ ವಿವಿಧ ಕಾನೂನು ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.​

ಸದ್ಯ ಅಂಕೋಲಾ ಪೊಲೀಸರು ಈ ಎರಡೂ ಪರಸ್ಪರ ವಿರೋಧಾಭಾಸದ ದೂರುಗಳ ಸತ್ಯಾಸತ್ಯತೆಯನ್ನು ಭೇದಿಸಲು ತನಿಖೆ ಮುಂದುವರಿಸಿದ್ದು, ಕೇವಲ ನೀರಿನ ಟ್ಯಾಂಕರ್ ನಿಲ್ಲಿಸುವ ಜಾಗದ ವಿಚಾರಕ್ಕಾಗಿ ನಡೆದ ಈ ರಣಾಂಗಣ ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *

error: Content is protected !!