ಅಂಕೋಲಾ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಪೋಲಿಸ್ ಇಲಾಖೆಯ ದುರುವರ್ತನೆ ಹಾಗೂ ಅನ್ಯಾಯದ ವಿರುದ್ಧ ಅಂಕೋಲಾದ ಖ್ಯಾತ ನ್ಯಾಯವಾದಿ ನಾಗರಾಜ ನಾಯಕ ಅವರು ಕೈಗೊಂಡಿರುವ ಧರಣಿ ಸತ್ಯಾಗ್ರಹವು ನಿನ್ನೆ ಬುಧವಾರ 7ದಿನಕ್ಕೆ ಕಾಲಿಟ್ಟಿದೆ..
ಕಳೆದ ಐದು ದಿನಗಳಿಂದ ಅನ್ನ-ಆಹಾರ ತ್ಯಜಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅವರು ಶಾರೀರಿಕವಾಗಿ ಸಂಪೂರ್ಣ ನಿತ್ರಾಣಗೊಂಡಿದ್ದರೂ, ತಮ್ಮ ಛಲ ಬಿಡದೆ ಹೋರಾಟವನ್ನು ಮುಂದುವರಿಸಿದ್ದಾರೆ.ನಾಗರಾಜ ನಾಯಕರ ಈ ನ್ಯಾಯಯುತ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ನಿನ್ನೆ ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಸೂರಜ್ ನಾಯ್ಕ ಸೋನಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ನೈತಿಕ ಬೆಂಬಲವನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ನಾಗರಾಜ ನಾಯಕರ ಆರೋಗ್ಯ ವಿಚಾರಿಸಿ, ಅವರ ಹೋರಾಟದ ಉದ್ದೇಶಗಳ ಬಗ್ಗೆ ಚರ್ಚಿಸಿದರು.ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೂರಜ್ ನಾಯ್ಕ ಸೋನಿ ಅವರು, “ನಾಗರಾಜ ನಾಯಕರು ಅತ್ಯಂತ ಸಜ್ಜನ ವ್ಯಕ್ತಿತ್ವದವರು. ನೂರಾರು ಯುವಕರು ಸಂಕಷ್ಟದಲ್ಲಿದ್ದಾಗ ಕಾನೂನು ಹೋರಾಟದ ಮೂಲಕ ನ್ಯಾಯ ಕೊಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಹಿರಿಯ ನ್ಯಾಯವಾದಿಯೊಬ್ಬರು ಕಳೆದ ಏಳು ದಿನಗಳಿಂದ ಬೀದಿಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದರೂ ಸರ್ಕಾರ ಮತ್ತು ಪೋಲಿಸ್ ಇಲಾಖೆ ಮೌನ ವಹಿಸಿರುವುದು ಖೇದಕರ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, “ನಾಗರಾಜ ನಾಯಕರು ಕೇವಲ ಒಬ್ಬ ಬಿಜೆಪಿ ಮುಖಂಡ ಎಂದು ಕಾಂಗ್ರೆಸ್ ಸರ್ಕಾರ ಭಾವಿಸಬಾರದು. ಗೃಹ ಸಚಿವರು ಇಡೀ ರಾಜ್ಯಕ್ಕೆ ಮಂತ್ರಿಗಳಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಹಿರಿಯ ವ್ಯಕ್ತಿ ದಾಖಲೆ ಸಹಿತ ಅನ್ಯಾಯದ ಬಗ್ಗೆ ದೂರುತ್ತಿರುವಾಗ ಅದನ್ನು ಆಲಿಸುವ ಕನಿಷ್ಠ ಸೌಜನ್ಯವನ್ನು ತೋರಬೇಕು. ಅವರ ಬೇಡಿಕೆಗಳನ್ನು ತಕ್ಷಣವೇ ಪರಿಶೀಲಿಸಿ ನ್ಯಾಯ ಒದಗಿಸಬೇಕು,” ಎಂದು ಆಗ್ರಹಿಸಿದರು. ಸರ್ಕಾರದ ಇತ್ತೀಚಿನ ನಡೆಗಳನ್ನು ತೀವ್ರವಾಗಿ ಟೀಕಿಸಿದ ಅವರು, ನಾಗರಾಜ ನಾಯಕರ ಹೋರಾಟಕ್ಕೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.ಅನ್ನ ಸತ್ಯಾಗ್ರಹದಿಂದಾಗಿ ನಾಗರಾಜ ನಾಯಕರ ದೈಹಿಕ ಸ್ಥಿತಿ ಕ್ಷೀಣಿಸುತ್ತಿದ್ದು, ಅಂಕೋಲಾದ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಸರ್ಕಾರವು ಇನ್ನಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.













Leave a Reply