ಅಂಕೋಲಾ ಪುರಸಭೆ ಕಾನೂನು ಸಲಹೆಗಾರರ ಕುಟುಂಬದ ಕಟ್ಟಡಕ್ಕೆ ದೊಡ್ಡ ಹೊಡೆತ: ಓಸಿ ಅರ್ಜಿ ವಜಾ.

ಹೈಕೋರ್ಟ್ ಸೂಚನೆ ಬಳಿಕವೂ ಕಟ್ಟಡ್ದದ ದಾಖಲೆ ಸಲ್ಲಿಕೆ ವಿಫಲ: ಕಟ್ಟಡಕ್ಕೆ ಓಸಿ ಸಿಗದೆ ನಿರಾಸೆ.

ಅಂಕೋಲಾ :ಪುರಸಭೆ ವ್ಯಾಪ್ತಿಯ ಮಠಾಕೇರಿಯಲ್ಲಿ ನಿರ್ಮಾಣವಾಗಿರುವ ಪುರಸಭೆಯ ಕಾನೂನು ಸಲಹೆಗಾರ ವಕೀಲರ ಕುಟುಂಬದ ಕಟ್ಟಡ ವಿವಾದವು ಈಗ ಕಾನೂನುಬದ್ಧವಾಗಿ ಅಂತಿಮ ಹಂತಕ್ಕೆ ತಲುಪಿದೆ. ಈ ಪ್ರಕರಣದ ಹಿನ್ನೆಲೆಯನ್ನು ಗಮನಿಸಿದರೆ, ಪುರಸಭೆಯ ಹಿತ ಕಾಯಬೇಕಾದ ಕಾನೂನು ಸಲಹೆಗಾರರ ಪತ್ನಿ ಮತ್ತು ಅವರ ತಮ್ಮ (ಭಾವಮೈದ) ಜಂಟಿಯಾಗಿ ಖರೀದಿಸಿದ ಆಸ್ತಿಯ ಮೇಲೆ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ನಿರ್ಮಾಣದ ಆರಂಭದಲ್ಲೇ ಹಲವು ಗಂಭೀರ ಲೋಪಗಳು ಎದ್ದು ಕಾಣುತ್ತಿದ್ದು, ಲೇಔಟ್ ನಕ್ಷೆಯಿಲ್ಲದ ಜಮೀನಿಗೆ ಅಕ್ರಮವಾಗಿ ಈ-ಸ್ವತ್ತು ಸೃಜಿಸಲಾಗಿತ್ತು. ಅಷ್ಟೇ ಅಲ್ಲದೆ, ಜಂಟಿ ಖಾತೆಯಲ್ಲಿದ್ದ ಈ ಆಸ್ತಿಯನ್ನು ಅಧಿಕೃತವಾಗಿ ಹಂಚಿಕೆ ಮಾಡದೆಯೇ ಪುರಸಭೆಯ ಅಧಿಕಾರಿಗಳ ಸಾಥ್‌ನೊಂದಿಗೆ ಒಂದೇ ದಿನ ಎರಡು ಪ್ರತ್ಯೇಕ ಕಟ್ಟಡ ಪರವಾನಗಿಗಳನ್ನು ಪಡೆಯಲಾಗಿತ್ತು. ಇದು ಕರ್ನಾಟಕ ಪೌರಸಭೆಗಳ ಕಟ್ಟಡ ಬೈಲಾ ನಿಯಮಗಳ ನೇರ ಉಲ್ಲಂಘನೆಯಾಗಿತ್ತು.

ನಕ್ಷೆಯ ಪ್ರಕಾರ ಕಟ್ಟಡ ಕಟ್ಟುವಾಗಲೂ ಮಾಲೀಕರು ಕಾನೂನು ಪಾಲಿಸದೆ, ಕಟ್ಟಡದ ಸುತ್ತ ಬಿಡಬೇಕಾದ ಕಡ್ಡಾಯ ಜಾಗವನ್ನು (Setback) ಬಿಡದೆ ಆಕ್ರಮಿಸಿ ಕಟ್ಟಡ ಎಬ್ಬಿಸಲಾಗಿದೆ. ಇನ್ನು ಚಾವಣಿಯ ವಿಚಾರದಲ್ಲೂ ದೊಡ್ಡ ವಂಚನೆ ನಡೆದಿದ್ದು, ಅನುಮೋದಿತ ನಕ್ಷೆಯ ಪ್ರಕಾರ ಸಂಪೂರ್ಣ ಚಾವಣಿ ನಿರ್ಮಿಸಬೇಕೆಂದು ಇದ್ದರೂ, ವಾಸ್ತವದಲ್ಲಿ ಕೇವಲ ಅರ್ಧ ಭಾಗಕ್ಕೆ ಮಾತ್ರ ಚಾವಣಿ ಹಾಕಿ ನಿಯಮಬಾಹಿರವಾಗಿ ಅಲ್ಲಿಯೂ ಮತ್ತೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ಅಕ್ರಮಗಳ ವಿರುದ್ಧ ದೂರು ದಾಖಲಾದಾಗ ಪ್ರಕರಣವು ಲೋಕಾಯುಕ್ತದ ಮೆಟ್ಟಿಲೇರಿದ್ದು, ಪ್ರಸ್ತುತ ಪುರಸಭೆಯ ಐವರು ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದಡಿ ಲೋಕಾಯುಕ್ತ ತನಿಖೆ ಚಾಲ್ತಿಯಲ್ಲಿದೆ.

ಈ ಮಧ್ಯೆ ಮಾಲೀಕರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ರಕ್ಷಣೆ ಪಡೆಯಲು ಯತ್ನಿಸಿದ್ದರಾದರೂ, ನ್ಯಾಯಾಲಯವು “ಕಾನೂನು ಮತ್ತು ಪೌರಸಭೆ ಬೈಲಾ ನಿಯಮಗಳ ಚೌಕಟ್ಟಿನಲ್ಲಿದ್ದರೆ ಮಾತ್ರ ಓಸಿ (OC) ವಾಸಯೋಗ್ಯ ಪ್ರಮಾಣ ಪತ್ರ ನೀಡುವುದನ್ನು ಪರಿಶೀಲಿಸಿ” ಎಂದು ತಿಳಿಸಿತ್ತು. ಪುರಸಭೆಯ ಮುಖ್ಯಾಧಿಕಾರಿಗಳು ಹೈಕೋರ್ಟ್ ಆದೇಶದಂತೆ ದಾಖಲೆ ಸಲ್ಲಿಸಲು ಪದೇ ಪದೇ ಪುರಸಭೆಯ ಕಾನೂನು ಸಲಹೆಗಾರ ವಕೀಲರ ಕುಟುಂಬಕ್ಕೆ ನೋಟಿಸ್ ನೀಡಿದರೂ, ಮಾಲೀಕರ ಬಳಿ ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲದ ಕಾರಣ ಅವರು ಪುರಸಭೆಗೆ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಇದರ ಫಲವಾಗಿ ಪುರಸಭೆಯು ಈಗ ಅಧಿಕೃತವಾಗಿ ಅವರ ವಾಸಯೋಗ್ಯ ಪ್ರಮಾಣಪತ್ರದ (OC) ಅರ್ಜಿಯನ್ನು ವಜಾಗೊಳಿಸಿ ಕಡತವನ್ನೇ ವಿಲೇವಾರಿ ಮಾಡಿದೆ.

ಓಸಿ ಇಲ್ಲದ ಕಾರಣ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ಸಂಪರ್ಕ ಸಿಗದೆ ಇಡೀ ಕಟ್ಟಡಕ್ಕೆ ಈಗ ಸೋಲಾರ್ ಬೆಳಕೇ ಗತಿಯಾಗಿದೆ.ಪ್ರಮುಖವಾಗಿ ಈ ಕಟ್ಟಡವು ಪ್ರಾರಂಭದಿಂದ ಮುಗಿಯುವವರೆಗೂ ಪ್ರತಿ ಹಂತದಲ್ಲೂ ಕಾನೂನನ್ನು ಉಲ್ಲಂಘಿಸಿರುವುದು ಎದ್ದುಕಾಣುತ್ತಿದ್ದು, ಪುರಸಭೆಯ ಬೈಲಾ ಪ್ರಕಾರ ಈಗಾಗಲೇ ವಿಲೇವಾರಿಯಾಗಿರುವ ಕಡತದ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಸದರಿ ಕಟ್ಟಡ ನೆಲಸಮವಾಗುತ್ತದೆಯೋ ಅಥವಾ ಪ್ರಭಾವಿ ಹುದ್ದೆಯಲ್ಲಿರುವ ಪುರಸಭೆಯ ಕಾನೂನು ಸಲಹೆಗಾರ ವಕೀಲರನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೋ ಎಂಬ ಕುತೂಹಲ ಮೂಡಿದ್ದು, ಸಾರ್ವಜನಿಕರು ಈಗ ಅಧಿಕಾರಿಗಳ ಮುಂದಿನ ನಡೆಯನ್ನು ಕಾದು ನೋಡಬೇಕಿದೆ.

✍️ಕಿರಣ ಗಾಂವಕರ್..ಅಂಕೋಲಾ.

Leave a Reply

Your email address will not be published. Required fields are marked *

error: Content is protected !!