ಅಂಕೋಲಾ :”ಮಾನ್ಯ ಗೃಹ ಸಚಿವರೇ, ನಿಮ್ಮ ಆಪ್ತರ ಆಟಾಟೋಪ ಸಾಕು; ಅಂಕೋಲೆಗೆ ಶಾಂತಿ ಬೇಕು” ಎಂದು ಆಗ್ರಹಿಸಿ ಖ್ಯಾತ ನ್ಯಾಯವಾದಿ ನಾಗರಾಜ ನಾಯಕರು ಗೋಪಾಲಕೃಷ್ಣ ನಾಯಕರ ವಿರುದ್ಧ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹವು 5ನೇ ದಿನಕ್ಕೆ ಕಾಲಿಟ್ಟಿದೆ.
ಅಂಕೋಲಾದ ತಹಶೀಲ್ದಾರ್ ಕಚೇರಿಯ ಪ್ರವೇಶ ದ್ವಾರದ ಬಳಿ ಸತ್ಯಾಗ್ರಹ ನಡೆಸುತ್ತಿರುವ ನಾಗರಾಜ ನಾಯಕರು, ಕಳೆದ ಎರಡು ದಿನಗಳಿಂದ ಅನ್ನವನ್ನು ತ್ಯಜಿಸಿ ಸತ್ಯಾಗ್ರಹವನ್ನು ತೀವ್ರಗೊಳಿಸಿದ್ದಾರೆ.ಈ ಶಾಂತಿಯುತ ಧರಣಿ ನಡೆಯುತ್ತಿರುವ ಸ್ಥಳಕ್ಕೆ ನಿನ್ನೆ ದಿನಾಂಕ 11/05/2026ರಂದು ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭೇಟಿ ನೀಡಿ, ನಾಗರಾಜ ನಾಯಕರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದರು. ಈ ಸಂದರ್ಭದಲ್ಲಿ ನಾಗರಾಜ ನಾಯಕರು ತಾವು ನಡೆಸುತ್ತಿರುವ ಹೋರಾಟದ ಉದ್ದೇಶ ಹಾಗೂ ಇಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತಾದ ದಾಖಲೆಗಳನ್ನು ಸಂಸದರ ಗಮನಕ್ಕೆ ತಂದರು.
ನಂತರ ಮಾತನಾಡಿದ ಸಂಸದ ಕಾಗೇರಿಯವರು, ಮೊದಲನೆಯದಾಗಿ “ನಮ್ಮ ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಸಾಮಾಜಿಕ ಮುತ್ಸದ್ದಿ, ಕಾಂಗ್ರೆಸ್‌ನ ರಮಾನಂದ ನಾಯಕರ ನಿಧನಕ್ಕೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಹಾಗೂ ಅನೇಕ ಸಂಸ್ಥೆಗಳ ಮಾರ್ಗದರ್ಶಕರಾಗಿ ಅವರು ಸಲ್ಲಿಸಿದ ಸೇವೆ ಅನನ್ಯ. ಪರಿಸರ ಕಾಳಜಿ ಮತ್ತು ಬಡವರ ಪರವಾಗಿದ್ದ ಅವರ ಅಕಾಲಿಕ ಸಾವು ನಮಗೆ ತೀವ್ರ ದುಃಖ ತಂದಿದೆ. ನಾನು ಮೂರು ಬಾರಿ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕನಾಗಿದ್ದಾಗ ಅಭಿವೃದ್ಧಿ ಮತ್ತು ಬಡವರ ಹಿತದೃಷ್ಟಿಯಿಂದ ಅವರು ತೋರುತ್ತಿದ್ದ ಆಸಕ್ತಿ ನಮಗೆ ಕೆಲಸ ಮಾಡಲು ಪ್ರೇರಣೆಯಾಗಿತ್ತು. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ” ಎಂದು ಸ್ಮರಿಸಿದರು.
ಮುಂದುವರಿದು ಮಾತನಾಡಿದ ಕಾಗೇರಿಯವರು, “ನನ್ನ ಸ್ನೇಹಿತರು ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರಾದ, ಇಡೀ ರಾಜ್ಯಕ್ಕೆ ಪರಿಚಿತರಾದ ನ್ಯಾಯವಾದಿ ನಾಗರಾಜ ನಾಯಕರು ಕಳೆದ 5 ದಿನಗಳಿಂದ ಸತ್ಯಾಗ್ರಹ ಮಾಡುತ್ತಿದ್ದು, ಎರಡು ದಿನಗಳಿಂದ ಅನ್ನತ್ಯಾಗ ಮಾಡಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಕೃಷಿ ಹಾಗೂ ಯಕ್ಷಗಾನದಂತಹ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿರುವ ಇಂತಹ ಹಿರಿಯ ವ್ಯಕ್ತಿ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದಾರೆ ಎಂದರೆ, ಇಲ್ಲಿನ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದು ನಾಡಿನ ಜನತೆಗೆ ಅರ್ಥವಾಗುತ್ತದೆ. ಅಂಕೋಲಾದ ಜನರು ಅತ್ಯಂತ ಮುಗ್ಧರು ಮತ್ತು ಸುಸಂಸ್ಕೃತರು. ಆದರೆ ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಂಕೋಲಾ ತಾಲೂಕಿನ ಸಾಮಾಜಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ದ್ವೇಷ, ಅಸೂಯೆ, ಅರಾಜಕತೆ, ಭ್ರಷ್ಟಾಚಾರ ಹಾಗೂ ದಬ್ಬಾಳಿಕೆಯ ಆಡಳಿತ ನಡೆಯುತ್ತಿದೆ. ಕಾಂಗ್ರೆಸ್ ನಾಯಕರ ಒತ್ತಡದಿಂದಾಗಿ ಇಲ್ಲಿನ ಪರಿಸ್ಥಿತಿ ಹೀಗಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ನಾಗರಾಜ ನಾಯಕರನ್ನು ವೇದಿಕೆ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಹೋಗಿ ಪ್ರಚೋದನಕಾರಿಯಾಗಿ ಮಾತನಾಡಿದವರ ಹಿಂದೆ ಯಾರ ನೈತಿಕ ಬೆಂಬಲವಿದೆ ಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.”ಇಡೀ ರಾಜ್ಯದಲ್ಲಿ ಇಂದು ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅದರ ಪರಿಣಾಮ ಅಂಕೋಲದಲ್ಲಿ ಎದ್ದುಕಾಣುತ್ತಿದೆ. ಇಲ್ಲಿನ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅಸಹಾಯಕ ಸ್ಥಿತಿಯಲ್ಲಿದ್ದು, ಅಧಿಕಾರಿಗಳಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಅಕ್ರಮ ಮರಳುಗಾರಿಕೆ, ಗಣಿಗಾರಿಕೆ ಸೇರಿದಂತೆ ಹತ್ತು ಹಲವು ಅಕ್ರಮ ಚಟುವಟಿಕೆಗಳು ಇಲ್ಲಿ ರಾಜಾರೋಷವಾಗಿ ನಡೆಯುತ್ತಿವೆ ಎಂದು ಜನರು ನೋವಿನಿಂದ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರದ ಸಚಿವರ ಒತ್ತಡದಿಂದಾಗಿ ಅಧಿಕಾರಿಗಳಿಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರವು ಅಧಿಕಾರಿಗಳಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಅವರಿಗೆ ಸ್ವಾತಂತ್ರ್ಯ ನೀಡಬೇಕು” ಎಂದು ಆಗ್ರಹಿಸಿದರು.”ನಾಗರಾಜ ನಾಯಕರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುವಂತೆ ಮಾಡಲು ನಾನು ಸಂಸದನಾಗಿ ಪ್ರಯತ್ನಿಸುತ್ತೇನೆ. ಗೃಹ ಸಚಿವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಇಲ್ಲಿನ ವಸ್ತುಸ್ಥಿತಿ ಹಾಗೂ ರಾಜಕೀಯ ಹಸ್ತಕ್ಷೇಪದ ಬಗ್ಗೆ ಮಾಹಿತಿ ನೀಡುತ್ತೇನೆ.
ಗೋಪಾಲಕೃಷ್ಣ ನಾಯಕರ ಹಿನ್ನೆಲೆ ಮತ್ತು ಅವರ ಮೇಲಿರುವ ಪ್ರಕರಣಗಳ ಬಗ್ಗೆ ಅಂಕೋಲೆಯ ಜನರಿಗೆ ಚೆನ್ನಾಗಿ ಗೊತ್ತಿದೆ. ಇಂತಹ ವ್ಯಕ್ತಿಗಳಿಗೆ ಸರ್ಕಾರದ ಬೆಂಬಲವಿದೆ ಎಂಬ ಸಂದೇಶ ಹೋದರೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿಯುತ್ತಾರೆ. ಹಾಗಾಗಿ ಗೃಹ ಸಚಿವರಿಗೆ ಈ ವಿಷಯದ ಗಂಭೀರತೆಯನ್ನು ತಿಳಿಸುತ್ತೇನೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಹಾಗೂ ಮೆದುಳು ಇಲ್ಲದಂತಾಗಿದೆ. ಇದಕ್ಕೆ ಮಾನವೀಯ ಸ್ಪಂದನೆಗಳಿಲ್ಲ” ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೊನೆಯಲ್ಲಿ ನಾಗರಾಜ ನಾಯಕರಿಗೆ ವಿನಂತಿಸಿದ ಕಾಗೇರಿಯವರು, “ನಾಗರಾಜ ನಾಯಕರೇ, ನೀವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸತ್ಯವನ್ನು ತಿಳಿಸುವ ಮಹತ್ವದ ಕೆಲಸ ಮಾಡಿದ್ದೀರಿ. ನಿಮ್ಮ ಈ ಹೋರಾಟ ಸ್ವಾರ್ಥಕ್ಕಾಗಿ ಅಲ್ಲ ಎಂಬುದು ಜಗತ್ತಿಗೆ ಗೊತ್ತಿದೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಹಾಗೂ ನೀವು ಸಮಾಜಕ್ಕೆ ಬೇಕಾಗಿರುವ ಕಾರಣದಿಂದಾಗಿ, ದಯವಿಟ್ಟು ಈ ಅನ್ನ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಪ್ರೀತಿಯಿಂದ ವಿನಂತಿಸಿಕೊಳ್ಳುತ್ತೇನೆ” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರಾದ ಜಗದೀಶ್ ಮೊಗಟಾ. ಕಾಂಗ್ರೆಸ್ರ ಮುಖಂಡ ಉದಯ ವಾಮನ ನಾಯಕ್.. ವಿಶ್ವನಾಥ ನಾಯಕ..ರಾಜು ಹರಿಕಂತ್ರ ವಕೀಲರು. ಅಂಕೋಲಾ ಪುರಸಭೆಮಾಜಿ ಸದಸ್ಯೆ ಜಯಾ ಬಾಲಕೃಷ್ಣ ನಾಯ್ಕ್… ಹನುಮಂತ ಗೌಡ. ಸೇರಿದಂತೆ ಅನೇಕ ಪ್ರಭಾವಿ ಮುಖಂಡರು. ಸಾರ್ವಜನಿಕರು ಉಪಸ್ಥಿತರಿದ್ದರು.













Leave a Reply