ಪ್ರಚಾರದ ಅಮಲಿಗೆ ಪುರಸಭೆಯ ಬ್ರೇಕ್: ಅಂಕೋಲಾದಲ್ಲಿ ಅಧಿಕಾರಿಯ ‘ಅಸಲಿ’ ಪವರ್ ಪ್ರದರ್ಶನ!
ಅಂಕೋಲಾದ ಬೀದಿಗಳಲ್ಲಿ ಓಡಾಡುವ ಜನರಿಗೆ ಇಂದು ಒಂದು ಹೊಸ ನಿರಾಳತೆ ಸಿಕ್ಕಿದೆ. ರಸ್ತೆಯ ತಿರುವುಗಳಲ್ಲಿ ಕಣ್ಣು ಕುಕ್ಕುತ್ತಿದ್ದ, ವಾಹನ ಸವಾರರ ದೃಷ್ಟಿ ಮರೆಮಾಚುತ್ತಿದ್ದ ಆ ಬೃಹತ್ ಬ್ಯಾನರ್‌ಗಳ ದಂಡು ಇಂದು ಸದ್ದಿಲ್ಲದೆ ಮಾಯವಾಗಿದೆ!
ಕಳೆದ ಕೆಲವು ದಿನಗಳಿಂದ ಅಮಾಯಕರ ರಕ್ತ ರಸ್ತೆಯ ಮೇಲೆ ಹರಿಯಲು ಕಾರಣವಾಗಿದ್ದ ಈ ‘ಬ್ಯಾನರ್ ಸಂಸ್ಕೃತಿ’ ವಿರುದ್ಧ ‘ಕ್ರಾಂತಿಕಾರಿ ನ್ಯೂಸ್’ ಧ್ವನಿ ಎತ್ತಿತ್ತು. ನಮ್ಮ ವರದಿ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಸ್ಪಂದಿಸಿದ ಅಂಕೋಲಾ ಪುರಸಭೆ ಅಧಿಕಾರಿಗಳು, ಇಂದು ಬೆಳಿಗ್ಗೆ 10 ಗಂಟೆಯ ನಂತರ ಅಂಕೋಲಾದ ಪ್ರಮುಖ ವೃತ್ತಗಳಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಸ್ಥಳದಲ್ಲಿ ಹಾಕಿದ ಬ್ಯಾನರ್ ತೆರವುಗೊಳಿಸಿದ್ದಾರೆ.

ನಿಜಕ್ಕೂ ಅಧಿಕಾರಿಗಳು ನಿನ್ನೆ ರಾತ್ರಿಯೇ ಈ ಕಾರ್ಯಾಚರಣೆಗೆ ಸಜ್ಜಾಗಿದ್ದರು. ಆದರೆ ದುರದೃಷ್ಟವಶಾತ್, ಪುರಸಭೆಯ ಪೌರಕಾರ್ಮಿಕರೊಬ್ಬರು ನಿನ್ನೆ ನಿಧನರಾದ ಕಾರಣ, ಅವರ ಗೌರವಾರ್ಥ ನಿನ್ನೆ ಈ ಕಾರ್ಯವನ್ನು ಕೈಗೆತ್ತಿಕೊಂಡಿರಲಿಲ್ಲ.
ಇಂದು ಬೆಳಿಗ್ಗೆ ಸಮಯ 10 ಗಂಟೆಯಾಗುತ್ತಿದ್ದಂತೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಶ್ರೀ ಎಸು ಎಸ್ ಬೆಂಗಳೂರು ಅವರ ಖಡಕ್ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ಶುರುವಾಯಿತು. ಕಂದಾಯ ಅಧಿಕಾರಿ ದಿಲೀಪ್ ನಾಯ್ಕ್ ಅವರು ತಮ್ಮ ಅಧೀನ ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡುತ್ತಾ ತಂಡವನ್ನು ಮುನ್ನಡೆಸಿದರು.
ಅಂಕೋಲಾದ ಜೈ ಹಿಂದ್ ಹೈಸ್ಕೂಲ್ ಸರ್ಕಲ್ ವೃತ್ತ ಸೇರಿದಂತೆ ವಿದ್ಯುತ್ ಕಂಬಗಳು ಹಾಗೂ ಮಾರುಕಟ್ಟೆಯ ಅಪಾಯಕಾರಿ ತಿರುವುಗಳಲ್ಲಿ ಹತ್ತಕ್ಕೂ ಹೆಚ್ಚು ಬೃಹತ್ ಬ್ಯಾನರ್‌ಗಳನ್ನು ಪುರಸಭೆ ಸಿಬ್ಬಂದಿ ಕಿತ್ತೆಸೆದಿದ್ದಾರೆ.ಈ ಕಾರ್ಯಾಚರಣೆಯ ಮುಂಚೂಣಿಯಲ್ಲಿದ್ದ ಪೌರಕಾರ್ಮಿಕ ಉಮಾಕಾಂತ್ ನಾಯ್ಕ್ ಮತ್ತು ಅವರ ತಂಡದವರು, ಪುರಸಭೆಯ ರಿಕ್ಷಾದಲ್ಲಿ ನಾಲ್ಕೈದು ಟ್ರಿಪ್ ಹೊಡೆದು ಬ್ಯಾನರ್‌ಗಳ ದಂಡನ್ನೇ ಸಾಗಿಸಿದ್ದಾರೆ. ಶಾಸಕರು ಸೇರಿದಂತೆ ಹಲವು ಗಣ್ಯರ ಭಾವಚಿತ್ರವಿದ್ದ ಫ್ಲೆಕ್ಸ್‌ಗಳನ್ನೂ ಸಹ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಮೆರೆದಿದ್ದಾರೆ.
ಜನರ ಜೀವ ರಕ್ಷಣೆಯೇ ನಮಗೆ ಮುಖ್ಯ ಎಂಬಂತೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ನಗರದಾದ್ಯಂತ ಇನ್ನೂ ಅನೇಕ ಬ್ಯಾನರ್‌ಗಳಿದ್ದು, ಅಧಿಕಾರಿಗಳು ಈಗ ಪ್ರತಿಯೊಂದರ ಅವಧಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅನುಮತಿ ಪಡೆದ ಬ್ಯಾನರ್‌ಗಳ ಕಾಲಮಿತಿ ಮುಗಿಯುತ್ತಿದ್ದಂತೆಯೇ ಅವುಗಳನ್ನು ಕೂಡ ತೆರವುಗೊಳಿಸಲು ಸಿದ್ಧತೆ ನಡೆಸಲಾಗಿದೆ.
ಸದ್ಯ ವಶಪಡಿಸಿಕೊಂಡಿರುವ ಬ್ಯಾನರ್‌ಗಳ ಮಾಲೀಕರಿಗೆ ಭಾರೀ ಮೊತ್ತದ ದಂಡ ವಿಧಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಅಂಕೋಲಾ ವ್ಯಾಪ್ತಿಯಲ್ಲಿ ಈ ಬ್ಯಾನರ್ ಸಂಸ್ಕೃತಿಗೆ ಶಾಶ್ವತವಾಗಿ ಕಡಿಯಾಣ ಹಾಕುವ ನಿಟ್ಟಿನಲ್ಲಿ ಪುರಸಭೆಯು ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ಅಂಕೋಲಾದ ಪ್ರಜ್ಞಾವಂತ ಸಾರ್ವಜನಿಕರು ಇಂದು ಅಧಿಕಾರಿಗಳ ಈ ಕರ್ತವ್ಯ ಪ್ರಜ್ಞೆಗೆ ‘ಸಲಾಂ’ ಎನ್ನುತ್ತಿದ್ದಾರೆ. ಅಧಿಕಾರಿಗಳ ಈ ಇಚ್ಛಾಶಕ್ತಿ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮೆಲ್ಲರ ಆಶಯ.
ವರದಿ :ಕಿರಣ ಗಾಂವಕರ ✍️














Leave a Reply