ಶಿಬಿರ ಮಕ್ಕಳ ಮನದಲ್ಲಿ ಮೌಲ್ಯಗಳ ಬಿತ್ತನೆ: ಕೆ.ಎಲ್.ಇ ಶಿಬಿರಕ್ಕೆ ಭಾರೀ ಸ್ಪಂದನೆ.
ಅಂಕೋಲ: ಪಟ್ಟಣದ ಕೆ.ಎಲ್.ಇ ಸೊಸೈಟಿಯ ಕಿಂಡರ್ ಗಾರ್ಟನ್ ಹಾಗೂ ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ‘ಮಕ್ಕಳ ಬೇಸಿಗೆ ಶಿಬಿರ-2026’ ಅತ್ಯಂತ ಯಶಸ್ವಿಯಾಗಿ ಜರುಗಿತು.
ಏಪ್ರಿಲ್ 7 ರಿಂದ 14 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ ನಡೆದ ಈ ಶಿಬಿರದಲ್ಲಿ ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಮಕ್ಕಳಿಗೆ ನೃತ್ಯ, ಸಂಗೀತ, ಯೋಗ, ಕರಾಟೆ ತರಬೇತಿ ನೀಡುವುದರ ಜೊತೆಗೆ ಶೈಕ್ಷಣಿಕ ಪ್ರವಾಸ (ಪಿಕನಿಕ್), ಮೋಜಿನ ಆಟಗಳು, ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು, ನಾಟಕ ತರಬೇತಿ, ಮೌಲ್ಯ ಶಿಕ್ಷಣ ಹಾಗೂ ಆರೋಗ್ಯ ಶಿಕ್ಷಣದ ಕುರಿತು ವಿಶೇಷ ಅರಿವು ಮೂಡಿಸಲಾಯಿತು.
ಮುಖ್ಯವಾಗಿ ಮಕ್ಕಳಲ್ಲಿ ಓದುವ ಮತ್ತು ಬರೆಯುವ ತಂತ್ರಗಳನ್ನು ಅಭಿವೃದ್ಧಿಪಡಿಸುವ ಹಾಗೂ ಸೇವೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ತಜ್ಞರಿಂದ ಮಾರ್ಗದರ್ಶನ ನೀಡಲಾಯಿತು.ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಶ್ವರೂಪ ಆರೋಗ್ಯಧಾಮದ ಸ್ಥಾಪಕರಾದ ಡಾ. ರವಿ ಶರ್ಮಾ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಅರ್ಪಣಾ ಶರ್ಮಾ ಅವರು ಮಕ್ಕಳೊಂದಿಗೆ ಬೆರೆತು ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಪಣಾ ಶರ್ಮಾ ಅವರು, “ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? ಎನ್ನುವ ನಾಣ್ಣುಡಿಯಂತೆ ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಉತ್ತಮ ಸಂಸ್ಕಾರಗಳನ್ನು ನೀಡಬೇಕು. ಮಕ್ಕಳು ಆದರ್ಶ ಜೀವನ ನಡೆಸಲು ಮನುಷ್ಯತ್ವದ ಪಾಠಗಳು ಅತಿ ಮುಖ್ಯ. ಈ ವಯಸ್ಸಿನಲ್ಲಿ ಮಕ್ಕಳ ಮನಸ್ಸು ಪರಿಶುದ್ಧವಾಗಿದ್ದು, ಯಾವುದನ್ನೇ ಆದರೂ ಬೇಗನೆ ಕಲಿಯುತ್ತಾರೆ. ಅದಕ್ಕಾಗಿಯೇ ಈ ಶಿಬಿರದಲ್ಲಿ ಆಟ, ಹಾಡು ಮತ್ತು ನೃತ್ಯದ ಮೂಲಕ ಅವರಿಗೆ ಅರಿವಿಲ್ಲದಂತೆ ಆರೋಗ್ಯ ಸೂತ್ರಗಳನ್ನು ಹಾಗೂ ಬದುಕಿನ ಮೌಲ್ಯಗಳನ್ನು ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್ ಅವರು, “ನಮ್ಮ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷವಾಗಿ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಕೇವಲ ಪುಸ್ತಕದ ಪಾಠವಲ್ಲದೆ ಯೋಗ, ಸಂಗೀತದ ಮೂಲಕ ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸುವ ಹಾಗೂ ಅವರಿಗೆ ಖುಷಿ ನೀಡುವ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪಾಲಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳ ಕೌಶಲ್ಯ ವೃದ್ಧಿಗೆ ಸಹಕರಿಸಬೇಕು” ಎಂದು ಕರೆ ನೀಡಿದರು.
ಶಿಬಿರದಲ್ಲಿ ಶಾಲೆಯ ಸಹ ಶಿಕ್ಷಕರು ಕೂಡ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು, ಅವರಿಗೆ ನವೋತ್ಸಾಹ ತುಂಬುವಲ್ಲಿ ಯಶಸ್ವಿಯಾದರು.
ಈ ಸಮಾರಂಭದಲ್ಲಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀದೇವಿ ಆಚಾರಿ, ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಮುದ್ದಣ್ಣ ನಾಗರಹಳ್ಳಿ, ಬಿ. ಮುಷ್ರಪ್ಪ, ಪ್ರಶಾಂತ್ ಪೆಡ್ನೇಕರ್, ಆದೇಶ್ ಹುಲಗೇರಿ, ಬಿಂದುಶ್ರೀ, ರೇಖಾ ಕಾಂಬಳೆ, ಬಿಂದು ನಾಯಕ, ವಿದ್ಯಾ ನಾಯಕ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಕಾವ್ಯ ಗುನುಗ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಒಟ್ಟಾರೆಯಾಗಿ ಈ ಬೇಸಿಗೆ ಶಿಬಿರವು ಮಕ್ಕಳಲ್ಲಿ ಹೊಸ ಕೌಶಲ್ಯ, ಆತ್ಮವಿಶ್ವಾಸ ಮತ್ತು ಸ್ನೇಹ ಸಂಬಂಧಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು.













Leave a Reply