.ಅಂಕೋಲೆಯ ಅಭಿವೃದ್ಧಿಯಲ್ಲಿ ಆರ್ ಎನ್ ನಾಯಕರ ಹೆಸರು ಚಿರವಾಗಿದೆ: ಆರ್ ಟಿ ಮಿರಾಶಿ.
ಅಂಕೋಲಾ: ತಾಲ್ಲೂಕಿನ ಅಭಿವೃದ್ಧಿಯ ಪಥದಲ್ಲಿ ಆರ್ ಎನ್ ನಾಯಕರ ಹೆಸರು ಎಂದಿಗೂ ಚಿರವಾಗಿದೆ. ಅವರು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಸರ್ವರು ಅವರನ್ನು ಗೌರವಿಸುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ನಾಡವರ ಸಂಘದ ಅಧ್ಯಕ್ಷ ಮತ್ತು ಆರ್.ಎನ್.ನಾಯಕರ ಒಡನಾಡಿ ಆರ್. ಟಿ ಮಿರಾಶಿ ಹೇಳಿದರು
.ತಾಲ್ಲೂಕಿನ ಅಜ್ಜಿಕಟ್ಟಾದ ಕ್ರಿಸ್ತಮಿತ್ರ ಆಶ್ರಮದಲ್ಲಿ ಆರ್ ಎನ್ ನಾಯಕ ಅಭಿಮಾನಿ ಬಳಗ, ಒಡನಾಡಿಗಳು ಹಾಗೂ ಹಿತೈಷಿ ಬಳಗದ ವತಿಯಿಂದ ಹಮ್ಮಿಕೊಂಡ ಸಹಕಾರಿ ಧುರೀಣ ದಿವಂಗತ ಆರ್.ಎನ್.ನಾಯಕರ ಎಪ್ಪತ್ತನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇಂದು ಆರ್ ಎನ್ ನಾಯಕ ಬದುಕಿದ್ದರೆ ಅಂಕೋಲೆಯ ಅಭಿವೃದ್ಧಿ ಹಾಗೂ ಕ್ರಾಂತಿಕಾರಿಕ ಬದಲಾವಣೆಗಳನ್ನು ಯಾರೂ ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಅವರಿಂದ ಎಲ್ಲಾ ಕ್ಷೇತ್ರಗಳಿಗೂ ಅನುಕೂಲವಾಗಿದೆ ಎಂದರು.ಆರ್ ಎನ್ ನಾಯಕ ಅಭಿಮಾನಿ ಬಳಗದ ಅಧ್ಯಕ್ಷ ಅಡ್ಲೂರು ಗೋಪು ನಾಯಕ ಪ್ರಾಸ್ತವಿಕವಾಗಿ ಮಾತನಾಡಿ, ನನ್ನ ಹೃದಯ ಮಂದಿರದ ಹೊನ್ನ ಕಳಸ ಆರ್ ಎನ್ ನಾಯಕ. ನಮ್ಮೆಲ್ಲರ ಬೆಳವಣಿಗೆಯ ಹಿಂದೆ ಆರ್ ಎನ್ ಎನ್ನುವ ಮಹಾನ್ ಚೇತನದ ಅಸ್ಮಿತೆಯ ಆಶೀರ್ವಾದವಿದೆ. ದೇವಾಲಯಗಳ ಜೀರ್ಣೋದ್ಧಾರ, ಅನ್ನದಾಸೋಹ, ಅಕ್ಷರ ದಾಸೋಹ, ಸಾಹಿತ್ಯ ದಾಸೋಹ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವರ ಕೊಡುಗೆ ಸದಾ ಸ್ಮರಣೀಯ. ಆರ್ ಎನ್ ನಾಯಕರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾಗ್ಯ ಒದಗಿ ಬಂದಿದ್ದು ನನಗೆ ದೊರೆತ ಸುದೈವ ಎಂದರು.

ಬಿಜೆಪಿ ರಾಜ್ಯ ಒಬಿ ಸಿ ಮೋರ್ಚಾ ಪ್ರಮುಖ ರಾಜೇಂದ್ರ ನಾಯ್ಕ ಮಾತನಾಡಿ, ಪಕ್ಷಾತೀತವಾಗಿ ಜಾತ್ಯಾತೀತವಾಗಿ ಬಡವ ಶ್ರಮಿಕ ವರ್ಗದವರ ಉನ್ನತಿಗೆ ಶ್ರಮಿಸಿದವರು ದಿವಂಗತ ಆರ್ ಎನ್ ನಾಯಕರು. ಅವರು ನಮಗೆ ತೋರಿಸಿದ ಪ್ರೀತಿ ಕಾಳಜಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಜನ್ಮದಿನದ ಆಚರಣೆ ಶಾಶ್ವತವಾಗಿ ಮುಂದುವರೆಯುತ್ತದೆ. ಆರ್.ಎನ್ ನಾಯಕರಿಂದ ಸಮಾಜದಲ್ಲಿ ನನ್ನಂಥ ನೂರಾರು ಜನರು ಸ್ಥಾನಮಾನ ಗಳಿಸಿಕೊಂಡಿದ್ದೇವೆ. ಅವರು ಅಂಕೋಲೆಯ ಮರೆಯದ ಮಾಣಿಕ್ಯ ಎಂದರು.
ಅರ್ಬನ್ ಬ್ಯಾಂಕ್ ನಿರ್ದೇಶಕ ಉದಯ ವಾಮನ ನಾಯಕ ಮಾತನಾಡಿ, ಆರ್ ಎನ್ ನಾಯಕ ಎಂದರೆ ಅಂಕೋಲೆ ದೈವ ಪುರುಷ. ಸಮಾಜವನ್ನು ಒಗ್ಗೂಡಿಸುವ ಶಕ್ತಿ ಮತ್ತು ವ್ಯಕ್ತಿಯಾಗಿದ್ದರು. ಅಂಕೋಲೆಯ ಅಭಿವೃದ್ಧಿಯ ಪಥದಲ್ಲಿ ಅನೇಕ ಕೊಡುಗೆಗಳನ್ನು ನೀಡಿ, ಹಿಮಾಲಯದಂತ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರು ಅವರು ಎಂದರು.
ವಕೀಲ ಉಮೇಶ ನಾಯ್ಕ ಮಾತನಾಡಿ, ಆರ್ ಎನ್ ನಾಯಕರು ಆದರ್ಶ ವ್ಯಕ್ತಿತ್ವದಿಂದಲೇ ಸರ್ವರಿಗೂ ಪ್ರೀತಿ ಪಾತ್ರರಾಗಿದ್ದರು. ಅವರ ಅಭಿಮಾನಿಗಳಾಗಿ ಅವರನ್ನು ಸದಾ ಸ್ಮರಿಸುತ್ತೇವೆ. ಅಭಿಮಾನಿ ಬಳಗದ ಅಧ್ಯಕ್ಷ ಅಡ್ಲೂರು ಗೋಪು ಪ್ರತಿ ವರ್ಷ ಜನ್ಮದಿನಾಚರಣೆ ಮೂಲಕ ಅವರನ್ನು ಸ್ಮರಿಸಿ ಆರಾಧಿಸುವ ಅವಕಾಶ ನೀಡುತ್ತಿರುವುದು ಹರ್ಷದಾಯಕ ಎಂದರು.
ಎಷ್ಟೋ ವರ್ಷಗಳಿಂದ ಅಂಕೋಲೆಯ ವೆಂಕಟರಮಣ ದೇವಸ್ಥಾನದ ರಥೋತ್ಸವ ಆಚರಣೆ ನೆನೆಗುದಿಗೆ ಬಿದ್ದಂತ ಸಂದರ್ಭದಲ್ಲಿ ಅದನ್ನು ಪುನರ್ ಆರಂಭಿಸಿ ಸೂರ್ಯ ಚಂದ್ರ ಇರುವರೆಗೂ ಆ ಧಾರ್ಮಿಕ ಕಾರ್ಯ ನೆರವೇರಬೇಕು ಎಂದು ಪಣತೊಟ್ಟಿದ್ದವರು ಆರ್ ಎನ್ ನಾಯಕರು. ಅಂಕೋಲೆಯ ವೆಂಕಟರಮಣ ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಅನ್ನದಾಸೋಹಕ್ಕೆ ಕಾರ್ಣಿಕರ್ತರಾದವರು. ಸಹಕಾರಿ ಧುರೀಣ ದಿ ಆರ್ ಎನ್ ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಮೌನಚರಣೆಯ ಮೂಲಕ ಆರ್ ಎನ್ ನಾಯಕರ ಆತ್ಮಕ್ಕೆ ಶಾಂತಿ ಕೋರಲಾಯಿತು. ಆರ್.ಟಿ. ಮಿರಾಶಿ ಆಶ್ರಮ ವಾಸಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಆರ್ ಎನ್ ನಾಯಕ ಅಭಿಮಾನಿ ಬಳಗದ ಅಧ್ಯಕ್ಷ ಅಡ್ಲೂರು ಗೋಪು ನಾಯಕ, ಸ್ವಾಗತಿಸಿ ನಿರ್ವಹಿಸಿದರು. ಮಾರುತಿ ಹರಿಕಂತ್ರ ವಂದಿಸಿದರು. ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ವೇದಿಕೆಯಲ್ಲಿದ್ದರು. ಹರೀಶ ನಾಯಕ, ಆಶ್ರಮದ ನಿರ್ವಾಹಕ ಬಾಬು, ಮಂಜು ನಾಯಕ ಅಡ್ಲೂರು, ರಂಜನ್ ನಾಯಕ, ರಾಜೇಶ ನಾಯಕ, ಸಚಿತ್ ನಾಯಕ, ವಿಕ್ರಂ ಪಂತ್, ರಾಜೀವ ನಾಯಕ ಭಾವಿಕೇರಿ, ವಿಕಾಸ ನಾಯಕ, ಮಂಜುನಾಥ ನಾಯಕ, ವಿಕಾಸ ನಾಯಕ ಬೋಳೆ, ಮಹೇಶ ನಾಯಕ, ಪ್ರವೀಣ ನಾಯ್ಕ, ಆರ್ ಎನ್ ನಾಯಕ ಅಭಿಮಾನಿಗಳು ಮತ್ತು ಆಶ್ರಮವಾಸಿಗಳು ಇದ್ದರು.













Leave a Reply