ಮಹಿಳಾ ದಿನದ ವಿಶೇಷ: ಉತ್ತರ ಕನ್ನಡದ ಕಾನೂನು ಇತಿಹಾಸ ಬರೆದ ಮೊದಲ ಮಹಿಳಾ ವಕೀಲೆ ಶ್ರೀಮತಿ ಶಾಂತಾ ನಾರಾಯಣ ಹೆಗಡೆ – ಬಡವರ ಪಾಲಿನ ಆಶಾಕಿರಣ.

73ರಲ್ಲೂ ಬತ್ತದ ಕಿಚ್ಚು: ಅಂಕೋಲಾದ ನ್ಯಾಯದ ಅಂಗಳದ ‘ಸಿಂಹನಾದ’ ಶ್ರೀಮತಿ ಶಾಂತಾ ನಾರಾಯಣ ಹೆಗಡೆ!

ಅಂಕೋಲಾ:ಮಾರ್ಚ್ 8 “ವಕೀಲಿಕೆ ಎಂದರೆ ಕೇವಲ ಕಾನೂನಿನ ಪುಸ್ತಕಗಳಲ್ಲ, ಅದು ನ್ಯಾಯ ಮತ್ತು ಮಾನವೀಯತೆಯ ಹೋರಾಟ” ಎಂಬುದನ್ನು ತಮ್ಮ 49ವರ್ಷಗಳ ಸೇವೆಯ ಮೂಲಕ ಸಾಬೀತುಪಡಿಸಿದವರು ಅಂಕೋಲಾದ ಹಿರಿಯ ನ್ಯಾಯವಾದಿ ಶ್ರೀಮತಿ ಶಾಂತಾ ನಾರಾಯಣ ಹೆಗಡೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯಾಗಿ ಕಾನೂನು ವೃತ್ತಿಗೆ ಕಾಲಿಟ್ಟ ಮೊದಲ ನ್ಯಾಯವಾದಿಗಳಲ್ಲಿ ಒಬ್ಬರಾದ ಅವರು, ಇಂದು 73 ವರ್ಷದ ವಯಸ್ಸಿನಲ್ಲಿಯೂ ಅದೇ ಉತ್ಸಾಹದಿಂದ ನ್ಯಾಯದ ಹಾದಿಯಲ್ಲಿ ನಡೆಯುತ್ತಿರುವುದು ವಿಶೇಷ.

ಸಿದ್ದಾಪುರದಲ್ಲಿ ಜನಿಸಿದ ಶಾಂತಾ ಹೆಗಡೆ ಅವರು ತಮ್ಮ ಪ್ರಾಥಮಿಕ ಹಾಗೂ ಪದವಿ ಶಿಕ್ಷಣವನ್ನು ಅಲ್ಲಿಯೇ ಪೂರ್ಣಗೊಳಿಸಿ, ನಂತರ ಹುಬ್ಬಳ್ಳಿಯ ಜೆ.ಎಸ್.ಎಸ್. ಸಕ್ರಿ ಲಾ ಕಾಲೇಜಿನಲ್ಲಿ ನ್ಯಾಯಶಾಸ್ತ್ರ ಪದವಿಯನ್ನು ಪಡೆದರು. 1977ರಲ್ಲಿ ವಕೀಲರಾಗಿ ಸೇವೆಯನ್ನು ಆರಂಭಿಸಿದ ಅವರು, ಅಂಕೋಲಾ ನ್ಯಾಯಾಲಯದಲ್ಲಿ ಇಂದಿಗೂ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ದಿಟ್ಟವಾಗಿ ವಾದಿಸುತ್ತಾ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲ, ಅವರು ಎಲ್ಲದರಲ್ಲೂ ಸಮಾನರು ಎಂಬ ದೃಢ ನಿಲುವು ಹೊಂದಿರುವ ಶಾಂತಾ ಹೆಗಡೆ ಅವರು, ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ವ್ಯಕ್ತಿತ್ವ.

ಸಮಾಜದಲ್ಲಿ ಮಹಿಳೆಯರ ಬಗ್ಗೆ ಯಾರಾದರೂ ಅವಹೇಳನಕಾರಿ ಮಾತು ಆಡಿದರೆ ತಕ್ಷಣ ಪ್ರತಿಕ್ರಿಯಿಸುವ ಧೈರ್ಯ ಮತ್ತು ಸ್ಪಷ್ಟ ನಿಲುವು ಅವರ ವ್ಯಕ್ತಿತ್ವದ ವೈಶಿಷ್ಟ್ಯವಾಗಿದೆ.ವಕೀಲಿಕೆಯ ವೃತ್ತಿಯಲ್ಲಿ ಹಣಕ್ಕಿಂತ ನ್ಯಾಯವೇ ಮುಖ್ಯ ಎಂಬ ತತ್ವವನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಯಾವುದೇ ಪ್ರಕರಣ ಬಂದಾಗ ಮೊದಲು ಕಕ್ಷಿದಾರರಿಂದ ಹಣ ಕೇಳುವುದಿಲ್ಲ. ಮೊದಲು ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿ ಅದು ನ್ಯಾಯಸಮ್ಮತವೋ ಇಲ್ಲವೋ ಎಂದು ಖಚಿತಪಡಿಸಿಕೊಂಡ ಬಳಿಕ ಮಾತ್ರ ಹೋರಾಟಕ್ಕೆ ಇಳಿಯುತ್ತಾರೆ. ನ್ಯಾಯಸಮ್ಮತವಾದ ಪ್ರಕರಣವಾದರೆ ಅದನ್ನು ಅಂತಿಮವಾಗಿ ನ್ಯಾಯ ದೊರೆಯುವವರೆಗೆ ದಿಟ್ಟವಾಗಿ ಮುಂದುವರೆಸುವುದು ಅವರ ವೃತ್ತಿಯ ಧರ್ಮವಾಗಿದೆ.

ಬಡ ಹಾಗೂ ಹಿಂದುಳಿದ ವರ್ಗದ ಜನರಿಗೆ ಅವರು ಅನೇಕ ಬಾರಿ ಮಾನವೀಯತೆಯಿಂದ ಉಚಿತವಾಗಿ ವಕಾಲತ್ತು ವಹಿಸಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಇಂತಹ ಸೇವೆಗಳನ್ನು ಅವರು ಎಲ್ಲಿಯೂ ಹೊಗಳಿಕೊಳ್ಳದೆ ಮೌನವಾಗಿ ಸಮಾಜ ಸೇವೆಯಾಗಿ ಮಾಡಿಕೊಂಡು ಬಂದಿದ್ದಾರೆ. ಹಲವಾರು ಬಾರಿ ನ್ಯಾಯಾಲಯಕ್ಕೆ ಬಂದ ಪಕ್ಷಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅನಗತ್ಯ ಪ್ರಕರಣಗಳನ್ನು ಸಮಾಧಾನದಿಂದ ಪರಿಹರಿಸಿದ ಉದಾಹರಣೆಗಳೂ ಅವರ ವೃತ್ತಿಜೀವನದಲ್ಲಿ ಕಂಡುಬರುತ್ತವೆ.ನ್ಯಾಯಾಲಯದಲ್ಲಿ ವಾದ ಮಾಡುವಾಗ ಅವರ ಮಾತಿನ ತೀಕ್ಷ್ಣತೆ ಮತ್ತು ಕಾನೂನು ಜ್ಞಾನ ಎದುರಾಳಿ ವಕೀಲರಿಗೂ ಸವಾಲಾಗಿ ಪರಿಣಮಿಸುತ್ತದೆ. ತಮ್ಮ ಕಕ್ಷಿದಾರರ ಪರವಾಗಿ ಅವರು ಮಾಡುವ ವಾದವು ಅಷ್ಟೊಂದು ಪರಿಣಾಮಕಾರಿಯಾಗಿರುತ್ತದೆ, ಕೆಲವೊಮ್ಮೆ ಕಕ್ಷಿದಾರರ ಕಣ್ಣಲ್ಲೇ ನೀರು ತರಿಸುವಷ್ಟು ಭಾವನಾತ್ಮಕ ಹಾಗೂ ಬಲವಾದ ವಾದವಿರುತ್ತದೆ ಎಂದು ನ್ಯಾಯಾಂಗ ವಲಯದಲ್ಲೇ ಮಾತು ಕೇಳಿಬರುತ್ತದೆ.

ಇಂದಿನ ವ್ಯವಸ್ಥೆಯ ಬಗ್ಗೆ, ವಿಶೇಷವಾಗಿ ಪೊಲೀಸ್ ಮತ್ತು ಕಾನೂನು ವ್ಯವಸ್ಥೆಯ ಜಟಿಲತೆಗಳ ಬಗ್ಗೆ ಶ್ರೀಮತಿ ಶಾಂತಾ ನಾರಾಯಣ ಹೆಗಡೆ ಅವರಿಗೆ ಅಪಾರವಾದ ಅರಿವಿದೆ. ತಮ್ಮ ಕಕ್ಷಿದಾರರಿಗೆ ಈ ವ್ಯವಸ್ಥೆಯ ವಾಸ್ತವತೆಯನ್ನು, ಬಹಳ ಸೂಕ್ಷ್ಮವಾಗಿ ಮತ್ತು ತಾಳ್ಮೆಯಿಂದ ಮನದಟ್ಟು ಮಾಡಿಕೊಡುವ ಅವರ ಪರಿಯೇ ವಿಶಿಷ್ಟ. ವಕೀಲರಾಗಿ ಮಾತ್ರವಲ್ಲದೆ, ಅವರು ಹಲವು ಸಂಘ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ನವದೀಪ ಮಹಿಳಾ ಮಂಡಳದ ಅಧ್ಯಕ್ಷರಾಗಿ, ಅಂಕೋಲಾ ತಾಲೂಕಿನ ಮಹಿಳಾ ಮಂಡಳಗಳ ಒಕ್ಕೂಟದ ಅಧ್ಯಕ್ಷರಾಗಿ, ಸಹಕಾರಿ ಸಂಘದ ಆರ್ಬಿಟ್ರೇಟರ್ ಆಗಿ, ಕಾನೂನು ಮಧ್ಯಸ್ಥಿಕೆದಾರರಾಗಿ, ಹಾಗೆಯೇ ಅಂಕೋಲಾ ವಕೀಲರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಅವರ ಕುಟುಂಬ ಜೀವನವೂ ಸಂಸ್ಕಾರಯುತ ಜೀವನದ ಪ್ರತಿಬಿಂಬವಾಗಿದೆ. ಅವರ ಪತಿ ನಾರಾಯಣ ಹೆಗಡೆ ಖ್ಯಾತ ಕ್ರಿಯಾಶೀಲ ವೈದ್ಯರಾಗಿದ್ದು, ತಮ್ಮ ಮೂವರು ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡಿ ಅವರು ದೇಶ-ವಿದೇಶಗಳಲ್ಲಿ ಉತ್ತಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. “ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಕ್ತಿಗೆ ಪಾರ್ವತಿ – ಎಲ್ಲಕ್ಕೂ ಮಿಗಿಲಾಗಿ ಜೀವವನ್ನು ನೀಡುವ ಶಕ್ತಿ ಹೆಣ್ಣಿನದು” ಎಂಬ ಮಾತಿನ ಜೀವಂತ ಉದಾಹರಣೆಯಾಗಿ ಶಾಂತಾ ನಾರಾಯಣ ಹೆಗಡೆ ಅವರು ಗುರುತಿಸಿಕೊಂಡಿದ್ದಾರೆ.73 ವರ್ಷದ ವಯಸ್ಸಿನಲ್ಲಿಯೂ ನ್ಯಾಯದ ಹಾದಿಯಲ್ಲಿ ಲವಲವಿಕೆಯಿಂದ ಸೇವೆ ಸಲ್ಲಿಸುತ್ತಿರುವ ಅವರು ಇನ್ನೂ ಹಲವು ವರ್ಷ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂಬುದು ಅವರ ಕಕ್ಷಿದಾರರು ಹಾಗೂ ಸಮಾಜದ ಜನರ ಆಶಯವಾಗಿದೆ.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇಂತಹ ಸಾಧಕ ಮಹಿಳೆಯರು ಸಮಾಜಕ್ಕೆ ಪ್ರೇರಣೆಯಾಗುತ್ತಾರೆ ಎಂಬುದು ಅಂಕೋಲಾ ಜನರ ಅಭಿಪ್ರಾಯವಾಗಿದೆ.

ವರದಿ :ಕಿರಣ ಗಾಂವಕರ ✍️

Leave a Reply

Your email address will not be published. Required fields are marked *

error: Content is protected !!