ಹೊನ್ನಳ್ಳಿ-ಸೀಬರ್ಡ್ ಪೈಪ್‌ಲೈನ್ ಕಾಮಗಾರಿಗೆ ಬಾಳೆಗುಳಿಯಲ್ಲಿ ಭಾರಿ ವಿರೋಧ: ತಕ್ಷಣ ಕಾಮಗಾರಿ ನಿಲ್ಲಿಸಲು ಪಿಡಿಒ ಸೂಚನೆ

ಅಂಕೋಲಾ :ಹೊನ್ನಳ್ಳಿಯಿಂದ ಸೀಬರ್ಡ್‌ಗೆ ನೀರಿನ ಪೈಪ್‌ಲೈನ್ ಅಳವಡಿಸುವ ಬಹುಕೋಟಿ ರೂಪಾಯಿ ಕಾಮಗಾರಿ ವಿಚಾರವಾಗಿ ಅಲಗೇರಿ ಗ್ರಾಮ ಸರ್ವೇ ನಂಬರನ ಬಾಳೆಗುಳಿಯ ಭಾಗದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ವಿವಿಧ ಇಲಾಖೆಗಳ ಅನುಮತಿಗಾಗಿ ಅಲಗೇರಿ ಗ್ರಾಮದ ಸರ್ವೆ ನಂಬರ್ 193ರ ಬಳಿ ಈ ಕಾಮಗಾರಿ ನಿಂತಿತ್ತು. ಇತ್ತೀಚೆಗೆ ಸರ್ಕಾರದಿಂದ ಅಗತ್ಯ ಅನುಮತಿ ಪಡೆದು ಕಾರವಾರದ ಅರ್ಬನ್ ವಾಟರ್ ಸಪ್ಲೈ ಇಲಾಖೆಯ ಮೂಲಕ ಸುಪ್ರದಾ ಕನ್ಸ್ಟ್ರಕ್ಷನ್ ಸಂಸ್ಥೆಯು ಮುಂದುವರಿದ ಕಾಮಗಾರಿಯನ್ನು ಮತ್ತೆ ಶುರು ಮಾಡಿದೆ.ಪೈಪ್‌ಲೈನ್ ಹಾದು ಹೋಗುವ ದಾರಿಯಲ್ಲಿ 70 ವರ್ಷಗಳಿಗೂ ಹೆಚ್ಚು ಕಾಲದಿಂದ ನೆಲೆಸಿರುವ ಹಲವು ಹಿಂದುಳಿದ ಬಡ ಕುಟುಂಬಗಳಿವೆ. ಅವರಿಗೆ ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ, ಪರಿಹಾರವನ್ನೂ ಘೋಷಿಸದೆ ಏಕಾಏಕಿ ಪೋಕ್ಲೆನ್ ಯಂತ್ರ ತಂದು ಭೂಮಿ ಅಗೆಯಲು ಆರಂಭಿಸಿದ್ದು ಜನರ ಕೋಪಕ್ಕೆ ಕಾರಣವಾಯಿತು. ಹಿಂದೆ ಸರ್ಕಾರವೇ 32ಕ್ಕೂ ಹೆಚ್ಚು ಕುಟುಂಬಗಳಿಗೆ ಅರಣ್ಯ ಭೂಮಿಯಲ್ಲಿ ಹಕ್ಕು ಪತ್ರ ನೀಡಿದ್ದು, ಆ ಜಾಗ ಈಗಾಗಲೇ ಡಿಸ್‌ಫಾರೆಸ್ಟ್ ಆಗಿದೆ. ಮನೆ, ಬಾವಿ ಮತ್ತು ಗಿಡಮರಗಳನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಬಡವರಿಗೆ ಕಾಮಗಾರಿಯಿಂದ ತಮ್ಮ ಆಸ್ತಿ ಕೈತಪ್ಪುವ ಆತಂಕ ಎದುರಾಗಿದೆ… ವಿಷಯ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಮತ್ತು ಪಿಎಸ್‌ಐ ಹಾದಿಮನಿ ಸ್ಥಳಕ್ಕೆ ಬಂದು ಜನರ ಮಾತು ಕೇಳಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ಅಲಗೇರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ತಳವಾರ್ ಸಹ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಶುರುವಾದ ಬಗ್ಗೆ ತನಗೇ ಮಾಹಿತಿ ಇರಲಿಲ್ಲ ಎಂದರು. ಪೈಪ್‌ಲೈನ್ ಹಾದು ಹೋಗುವ ಜಾಗದಲ್ಲಿ ಪಂಚಾಯಿತಿಯ ವಸತಿ ಮನೆಗಳು, ಬಾವಿ ಮತ್ತು ಗಿಡಮರಗಳಿದ್ದು, ಬಡ ಕುಟುಂಬಗಳಿಗೆ ಸರ್ಕಾರ ಪರಿಹಾರ ಕೊಡಬೇಕಿತ್ತು ಎಂದು ಸಂಬಂಧಪಟ್ಟ ಇಲಾಖೆಯ ಗಮನ ಸೆಳೆಯಲು ಯತ್ನಿಸಿದರು.

ಸ್ಥಳಕ್ಕೆ ಬಂದ ಅರ್ಬನ್ ವಾಟರ್ ಸಪ್ಲೈ ಅಧಿಕಾರಿಗಳು, ಪಹಣಿ ಪತ್ರಿಕೆ ಹೊಂದಿರುವ ಅಧಿಕೃತ ಮಾಲೀಕರಿಗೆ ಮಾತ್ರ ಪರಿಹಾರ ನೀಡಲಾಗಿದೆ, ಆದರೆ ಅರಣ್ಯ ಇಲಾಖೆ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಪರಿಹಾರ ಸಿಗುವುದಿಲ್ಲ ಮತ್ತು ಸರ್ಕಾರದಿಂದ ಈಗಾಗಲೇ ಅನುಮತಿ ಪಡೆದಾಗಿದೆ ಎಂದು ತಿಳಿಸಿದರು.

ಇದರ ಬೆನ್ನಲ್ಲೇ ಪಿಡಿಒ ಗಿರೀಶ್ ತಳವಾರ್ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ, ಆ ಜಾಗ ಡಿಸ್‌ಫಾರೆಸ್ಟ್ ಆಗಿದೆ ಎಂಬ ಮಾಹಿತಿ ಖಚಿತಪಡಿಸಿಕೊಂಡು ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಿದರು.ಕಾಮಗಾರಿ ಸಾಗುವ ಜಾಗದಲ್ಲಿ ಮೊದಲು ಲೈನ್ ಔಟ್ ಮಾಡಿದರೆ ಯಾರ ಮನೆ, ಬಾವಿ ಮತ್ತು ಗಿಡಮರಗಳಿಗೆ ಹಾನಿಯಾಗುತ್ತದೆ ಎಂಬುದು ನಿಖರವಾಗಿ ಗೊತ್ತಾಗುತ್ತದೆ. ಆದ್ದರಿಂದ ತಹಶೀಲ್ದಾರ್ ಮತ್ತು ವಿವಿಧ ಇಲಾಖೆಗಳ ಸಮ್ಮುಖದಲ್ಲಿ ಸರ್ವೆ ಇಲಾಖೆಯಿಂದ ಜಾಗ ಅಳತೆ ಮಾಡಬೇಕು, ಜನರಿಗೆ ನೋಟಿಸ್ ಕೊಟ್ಟು ಹಕ್ಕು ಪತ್ರಗಳ ಆಧಾರದ ಮೇಲೆ ಪರಿಹಾರ ಘೋಷಿಸಬೇಕು ಎಂದು ಜನತಾ ಕಾಲೋನಿಯ ನಿವಾಸಿಗಳು ಹಾಗೂ ಬೆಂಬಲವಾಗಿ ತಾಲೂಕು ಪಂಚಾಯಿತಿಯ ಮಾಜಿ ಸದಸ್ಯ ವಿನೋದ ಗಾಂವಕರ ಸೇರಿದಂತೆ ಇನ್ನು ಹಲವರು ಬಲವಾಗಿ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!