ಅಂಕೋಲ: ದೇಶಾದ್ಯಂತ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 20 ವರ್ಷಗಳೇ ಕಳೆದಿದ್ದರೂ, ಅಂಕೋಲದ ವಲಯ ಅರಣ್ಯಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇದುವರೆಗೂ ಮಾಹಿತಿ ಹಕ್ಕಿನ ನಾಮಫಲಕವನ್ನು ಅಳವಡಿಸದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ವಿವರಗಳನ್ನೊಳಗೊಂಡ ಬೋರ್ಡ್ ಹಾಕುವಂತೆ ಅಲ್ಲಿನ ಸಿಬ್ಬಂದಿಗೆ ಸಾರ್ವಜನಿಕರು ಹಾಗೂ ಸ್ಥಳೀಯ ಮಾಹಿತಿ ಕಾರ್ಯಕರ್ತರು ಹಲವಾರು ಬಾರಿ ಸೂಚಿಸಿದ್ದರೂ ಅಧಿಕಾರಿಗಳು ಮಾತ್ರ ಇದಕ್ಕೆ ಕ್ಯಾರೆ ಎನ್ನದೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಮಾಹಿತಿ ಹಕ್ಕುಗಳ ಆಯೋಗದ ಆಯುಕ್ತರು ಕಾರವಾರದ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕ ಸಂವಾದ ಹಮ್ಮಿಕೊಂಡಿದ್ದಾಗ, ಕಾಯ್ದೆ ಜಾರಿಯಾಗಿ ಎರಡು ದಶಕಗಳಾದರೂ ಜಿಲ್ಲೆಯ ಹಲವು ಸರ್ಕಾರಿ ಕಚೇರಿಗಳಲ್ಲಿ ಇನ್ನೂ ಬೋರ್ಡ್ಗಳನ್ನೇ ಹಾಕಿಲ್ಲ ಎಂಬ ಕಹಿ ಸತ್ಯವನ್ನು ಆಯುಕ್ತರ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ತಕ್ಷಣವೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಎಲ್ಲಾ ಕಚೇರಿಗಳಲ್ಲೂ ಕಡ್ಡಾಯವಾಗಿ ಮಾಹಿತಿ ಹಕ್ಕಿನ ಬೋರ್ಡ್ ಹಾಕಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದ್ದರಾದರೂ, ಪರಿಸ್ಥಿತಿ ಮಾತ್ರ ಇನ್ನೂ ಬದಲಾಗಿಲ್ಲ.
ನಿಯಮಗಳ ಪ್ರಕಾರ ಮಾಹಿತಿ ಹಕ್ಕು ಅಧಿನಿಯಮದ ಸೆಕ್ಷನ್ 5ರ ಅಡಿಯಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಕಡ್ಡಾಯವಾಗಿ ಈ ಬೋರ್ಡ್ಗಳನ್ನು ಪ್ರದರ್ಶಿಸಬೇಕಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೂಕ್ತ ಮಾಹಿತಿ ಸಿಗದೆ ಸಾರ್ವಜನಿಕರು ತಪ್ಪು ಪ್ರಾಧಿಕಾರಗಳಿಗೆ ಅರ್ಜಿ ಸಲ್ಲಿಸಿ ಪರದಾಡುವಂತಾಗಿದೆ. ಆದ್ದರಿಂದ, ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಅಂಕೋಲದ ಅರಣ್ಯ ಇಲಾಖೆಯ ಕಚೇರಿಗಳಲ್ಲಿ ಮಾಹಿತಿ ಹಕ್ಕಿನ ನಾಮಫಲಕವನ್ನು ಅಳವಡಿಸಲು ಮುಂದಾಗಬೇಕು ಎಂದು ಸ್ಥಳೀಯ ಮಾಹಿತಿ ಹಕ್ಕು ಬಳಕೆದಾರರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.













Leave a Reply