ಬೆಳಗಾವಿ: ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ 2 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗನ್ನು ಸುರಕ್ಷಿತವಾಗಿ ಮರಳಿಸುವ ಮೂಲಕ ಅಂಕೋಲಾ ಘಟಕದ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಅಂಕೋಲಾ ಘಟಕಕ್ಕೆ ಸೇರಿದ ಕುಮಟಾ-ಕೊಲ್ಲಾಪುರ ಮಾರ್ಗದ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬೀಡಿಯಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದರು. ಬೆಳಗಾವಿ ನಿಲ್ದಾಣದಲ್ಲಿ ಇಳಿಯುವ ಆತುರದಲ್ಲಿ ತಮ್ಮ ಬಳಿಯಿದ್ದ ಬ್ಯಾಗನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದರು.
ಸ್ವಲ್ಪ ಸಮಯದ ನಂತರ ಬಸ್ಸಿನಲ್ಲಿ ವಾರಸುದಾರರಿಲ್ಲದ ಬ್ಯಾಗ್ ಇರುವುದನ್ನು ಗಮನಿಸಿದ ನಿರ್ವಾಹಕ ಅಶೋಕ್ ಚವ್ಹಾನ್ ಹಾಗೂ ಚಾಲಕ ವೆಂಕಟೇಶ್ ಗುನಗ ಅವರು ಅದನ್ನು ಪರಿಶೀಲಿಸಿದಾಗ, ಬ್ಯಾಗ್ನಲ್ಲಿ 2 ಲಕ್ಷ ರೂಪಾಯಿ ನಗದು ಇರುವುದು ಕಂಡುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ, ಸಂಬಂಧಪಟ್ಟ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಗೆ ಬ್ಯಾಗ್ ಮತ್ತು ನಗದನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ಕಷ್ಟದ ಸಮಯದಲ್ಲಿ ಹಣವನ್ನು ಮರಳಿ ಪಡೆದ ಪ್ರಯಾಣಿಕರು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿರ್ವಾಹಕ ಅಶೋಕ್ ಚವ್ಹಾನ್ ಮತ್ತು ಚಾಲಕ ವೆಂಕಟೇಶ್ ಗುನಗ ಅವರ ಈ ಪ್ರಾಮಾಣಿಕ ನಡೆಗೆ ಸಾರ್ವಜನಿಕರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ
✍️ಕಿರಣ ಗಾಂವಕರ













Leave a Reply