ಅಂಕೋಲಾ :ಸಾರ್ವಜನಿಕ ಚರಂಡಿಗೇ ಕನ್ನ ಹಾಕಿದ ಪ್ರಭಾವಿಗಳು: ಪುರಸಭೆಗೆ ಮಾಹಿತಿಯೇ ಇಲ್ಲದೆ ಚರಂಡಿ ಸ್ಲ್ಯಾಬ್‌ಗಳು ತೆರವು; ಅಧಿಕಾರಿಗಳ ಮೌನವೇಕೆ?

ಅಂಕೋಲಾ: ಪಟ್ಟಣದ ಪ್ರಮುಖ ಸ್ಥಳದಲ್ಲಿ ಸಾರ್ವಜನಿಕರ ಆಸ್ತಿಯಾಗಿರುವ ಚರಂಡಿಯನ್ನೇ ಖಾಸಗಿ ವ್ಯಕ್ತಿಗಳು ಅತಿಕ್ರಮಿಸಲು ಮುಂದಾಗಿದ್ದು, ಪುರಸಭೆ ಅಧಿಕಾರಿಗಳ ಕಣ್ಣೆದುರೇ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕ ಚರಂಡಿಯ ಮೇಲಿನ ಸಿಮೆಂಟ್ ಸ್ಲ್ಯಾಬ್‌ಗಳನ್ನು ಕಿತ್ತುಹಾಕಿರುವ ಘಟನೆ ನಿನ್ನೆ ದಿನಾಂಕ 16/11/2026ರಂದು ನಡೆದಿದೆ.

ಪಟ್ಟಣದ ಹಳೆಯ ಸಮರ್ಥ ಟಾಕೀಸ್ ಇದ್ದ ಜಾಗವನ್ನು ನೆಲಸಮಗೊಳಿಸಿ, ಅಲ್ಲಿ ನೂತನ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಹಿಂದೆ ಸಮರ್ಥ ಚಿತ್ರಮಂದಿರ ಇದ್ದ ಸಂದರ್ಭದಲ್ಲಿ ಕಟ್ಟಡದ ಮಾಲೀಕರು ಚರಂಡಿಯನ್ನು ಹೊರತುಪಡಿಸಿ, ತಮ್ಮ ಖಾಸಗಿ ಜಾಗಕ್ಕೆ ಮಾತ್ರ ಸೀಮಿತವಾಗಿ ಆವರಣ ಗೋಡೆಯನ್ನು ನಿರ್ಮಿಸಿಕೊಂಡಿದ್ದರು. ಆ ಗೋಡೆಯ ಮುಂಭಾಗದಲ್ಲಿದ್ದ ಸಾರ್ವಜನಿಕ ಚರಂಡಿಯ ಮೇಲೆ ಸುಮಾರು 30ಕ್ಕೂ ಹೆಚ್ಚು ವರ್ಷಗಳಿಂದ ಹಲವಾರು ಸಣ್ಣ ವ್ಯಾಪಾರಿಗಳು ಗೂಡಂಗಡಿಗಳನ್ನು ಇಟ್ಟುಕೊಂಡು ಬದುಕು ಕಟ್ಟಿಕೊಂಡಿದ್ದರು. ನೂತನ ವಾಣಿಜ್ಯ ಕಟ್ಟಡ ಕಟ್ಟುವಾಗ ಕಟ್ಟಡದ ಮಾಲೀಕರು ಮುಂಭಾಗದ ಆವರಣ ಗೋಡೆಯನ್ನು ಕೆಡವಿದ ಕಾರಣ, ವ್ಯಾಪಾರಕ್ಕೆ ತೊಂದರೆಯಾಗಿ ಕೆಲವು ಗುಡಂಗಡಿಕಾರರು ಅಂಗಡಿಯನ್ನು ತೊರೆದಿದ್ದರು . ಇನ್ನುಳಿದ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಕೆಲವು ಗೂಡಂಗಡಿಕಾರರು ಪುರಸಭೆಗೆ ಮನವಿ ಸಲ್ಲಿಸಿ ತಮ್ಮ ಗೂಡಂಗಡಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಾ ಬಂದಿದ್ದಾರೆ.. ಕಟ್ಟಡ ಮಾಲೀಕರ ಒತ್ತಡದಿಂದಾಗಿಯೋ ಏನೋ ಪುರಸಭೆಯ ಅಧಿಕಾರಿಗಳು ಸದರಿ ಚರಂಡಿಯ ಮೇಲಿರುವ ಗೂಡಂಗಡಿಯನ್ನು ತೆರವುಗೊಳಿಸಲು ಹೆಚ್ಚಿನ ಆಸಕ್ತಿ ವಹಿಸಿ . ಚರಂಡಿಯ ಮಧ್ಯ ಭಾಗದಲ್ಲಿರುವ ಗುಡಂಗಡಿಕಾರರ ಮೇಲೆ ಒತ್ತಡ ಹಾಕಿರುವ ಕಾರಣ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಗೂಡಂಗಡಿಕಾರರು ವಿಧಿ ಇಲ್ಲದೆ ಚರಂಡಿಯ ಮಧ್ಯ ಭಾಗದ ತಮ್ಮ ಅಂಗಡಿಯನ್ನು ತೆರವುಗೊಳಿಸಿ ಚರಂಡಿಯ ಎಡ ಮತ್ತು ಬಲ ತುದಿಗಳಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ಇದೀಗ ವ್ಯಾಪಾರ ನಡೆಸುತ್ತಿದ್ದಾರೆ.

ಆದರೆ, ಮಧ್ಯಭಾಗದಲ್ಲಿದ್ದ ಗೂಡಂಗಡಿಗಳು ತೆರವುಗೊಂಡ ಕೆಲವೇ ದಿನಗಳಲ್ಲಿ, ಕಟ್ಟಡದ ಮಾಲೀಕರ ಕಣ್ಣು ಈಗ ಖಾಲಿಯಾಗಿರುವ ಸಾರ್ವಜನಿಕ ಚರಂಡಿಯ ಮೇಲೆ ಬಿದ್ದಿದೆ. ತಮ್ಮ ಖಾಸಗಿ ಜಮೀನಿನೊಳಗೆ ಏನು ಬೇಕಾದರೂ ನಿರ್ಮಿಸಿಕೊಳ್ಳಲು ಅವರಿಗೆ ಸಂಪೂರ್ಣ ಹಕ್ಕಿದೆ. ಆದರೆ, ಸಾರ್ವಜನಿಕರ ಬಳಕೆಗೆ ಇರುವ ಚರಂಡಿಯ ಮೇಲಿನ ಸಿಮೆಂಟ್ ಕಲ್ಲುಗಳನ್ನು (ಸ್ಲ್ಯಾಬ್‌ಗಳನ್ನು) ಪುರಸಭೆಯ ಗಮನಕ್ಕೇ ತರದೆ ಬೇಕಾಬಿಟ್ಟಿಯಾಗಿ ಕಿತ್ತುಹಾಕಿ, ಅಲ್ಲಿ ತಮ್ಮ ವ್ಯಾಪಾರಕ್ಕೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲು ಇವರಿಗೆ ಅಧಿಕಾರ ನೀಡಿದವರು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಈ ಕುರಿತು ಪುರಸಭೆಯ ಇಂಜಿನಿಯರ್ ಅವರನ್ನು ಸಂಪರ್ಕಿಸಿದರೆ, ಚರಂಡಿ ಸ್ಲ್ಯಾಬ್‌ಗಳನ್ನು ತೆಗೆದಿರುವ ಬಗ್ಗೆ ತಮಗೆ ಯಾವುದೇ ಮಾಹಿತಿಯೇ ಇಲ್ಲ ಎಂದು ಬೇಜವಾಬ್ದಾರಿಯುತ ಉತ್ತರ ನೀಡುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಯ ಬದಿಯಲ್ಲೇ ಸಾರ್ವಜನಿಕ ಚರಂಡಿಯನ್ನು ತೆರೆದಿಟ್ಟು ಅತಿಕ್ರಮಣಕ್ಕೆ ಮುಂದಾಗಿದ್ದರೂ ಕೇಳುವವರಿಲ್ಲದಂತಾಗಿದೆ. ಕಟ್ಟಡ ಮಾಲೀಕರ ಪ್ರಭಾವಕ್ಕೆ ಮಣಿದು ಸಾರ್ವಜನಿಕ ಆಸ್ತಿ ಪರಭಾರೆಯಾಗುವ ಮುನ್ನವೇ, ಪುರಸಭೆಯ ಮುಖ್ಯಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ಅಕ್ರಮವಾಗಿ ಚರಂಡಿ ಸ್ಲ್ಯಾಬ್‌ಗಳನ್ನು ತೆಗೆದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕ ಚರಂಡಿಯನ್ನು ರಕ್ಷಿಸಬೇಕು ಎಂದು ಪಟ್ಟಣದ ನಾಗರಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!