ಬೆಳಸೆ ಬಳಿ ಭೀಕರ ಅಪಘಾತ: 2 ವರ್ಷದ ಕಂದಮ್ಮ ದಾರುಣ ಸಾವು, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ, ಕೆಳಗಿನ ಮಂಜುಗುಣಿಯಲ್ಲಿ ಶೋಕಸಾಗರ.

ಅಂಕೋಲಾ : ತಾಲ್ಲೂಕಿನ ಬೆಳಸೆ ಹಂದಿಗದ್ದೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 2 ವರ್ಷದ ಮುದ್ದು ಕಂದಮ್ಮ ದಾರುಣವಾಗಿ ಸಾವನ್ನಪ್ಪಿದೆ. ಅಪಘಾತದಲ್ಲಿ ಸಾರಿಗೆ ಸಂಸ್ಥೆ ಯ ಬಸ್ ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾರಿಗೆ ಬಸ್ ಕುಮಟಾ ದಿಂದ ಅಂಕೋಲಾ ಮಾರ್ಗವಾಗಿ ಚಲಿಸುತ್ತಿದ್ದು ಈ ವೇಳೆ ತಿರುವಿನಲ್ಲಿ ಅಂಕೋಲಾದಿಂದ ಕುಮಟಾ ಮಾರ್ಗವಾಗಿ ಬಂದ ಲಾರಿಗೆ ಡಿಕ್ಕಿಯಾಗಿ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಘಟನೆಯಲ್ಲಿ ಅಂಕೋಲಾ ತಾಲೂಕಿನ ಕೆಳಗಿನ ಮಂಜುಗುಣಿ ನಿವಾಸಿ, ಬಡ ರಿಕ್ಷಾ ಚಾಲಕ ನಿತ್ಯಾನಂದ ಈಶ್ವರ ತಾಂಡೇಲ್ ಅವರ 2 ವರ್ಷದ ಗಂಡು ಮಗು ಅಕಾಲಿಕವಾಗಿ ಕೊನೆಯುಸಿರೆಳೆದಿದೆ. ಈ ದುರಂತ ಸುದ್ದಿ ತಿಳಿಯುತ್ತಿದ್ದಂತೆ ಕೆಳಗಿನ ಮಂಜುಗುಣಿ ಗ್ರಾಮದಲ್ಲಿ ಶೋಕಸಾಗರ ಆವರಿಸಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಅಪಘಾತದಲ್ಲಿ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರ ಮುಖ ಹಾಗೂ ದವಡೆಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿದ್ದ ಅಂಕೋಲಾದ ದಂತ ವೈದ್ಯರಾದ ಡಾ. ಸಂಜು ನಾಯಕ್ ಹಾಗೂ ಇವರ ತಮ್ಮ ಕಾರವಾರದ ದಂತ ವೈದ್ಯರಾದ ಡಾ. ಸಮೀರ ಕುಮಾರ ನಾಯಕ್ ಅವರು ತಕ್ಷಣವೇ ಸ್ಪಂದಿಸಿ, ಗಾಯಾಳುಗಳನ್ನು ಹಾಗೂ ಮಗು ಹಾಗೂ ಮಗುವಿನ ಹೆತ್ತವರನ್ನು ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ನೀಡಿದರು. ಆದರೆ ಎಷ್ಟೇ ಪ್ರಯತ್ನಿಸಿದರೂ ಎರಡು ವರ್ಷದ ಕಂದಮ್ಮನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.”..

Leave a Reply

Your email address will not be published. Required fields are marked *

error: Content is protected !!