ಅಂಕೋಲಾ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ರೈತರೊಬ್ಬರಿಗೆ ಹಾಗೂ ಅವರ ಕುಟುಂಬಕ್ಕೆ ದಾಯಾದಿ ಸಂಬಂಧಿಯೊಬ್ಬರು ನಿರಂತರ ಕಿರುಕುಳ ಮತ್ತು ಪ್ರಾಣಬೆದರಿಕೆ ಒಡ್ಡಿರುವ ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಕಲ್ ನಿವಾಸಿ, ರೈತ ಲಕ್ಷ್ಮೀಧರ ನಾರಾಯಣ ನಾಯಕ (38) ಎಂಬುವರು ನೀಡಿದ ದೂರಿನ ಮೇರೆಗೆ ಅವರ ದಾಯಾದಿ ಸಂಬಂಧಿ ಮಂಜುನಾಥ ಬೊಮ್ಮಯ್ಯ ನಾಯಕ (48), ಆತನ ಪತ್ನಿ ಸಂಧ್ಯಾ ಮಂಜುನಾಥ ನಾಯಕ ಮತ್ತು ತಾಯಿ ಭವಾನಿ ಬೊಮ್ಮಯ್ಯ ನಾಯಕ ಎಂಬುವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ಎಫ್.ಐ.ಆರ್ ದಾಖಲಿಸಲಾಗಿದೆ. ಮಾನ್ಯ ಜೆ.ಎಂ.ಎಫ್.ಸಿ ಅಂಕೋಲಾ ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ದೂರಿನ ವಿವರಗಳ ಪ್ರಕಾರ, ಕಳೆದ ಜೂನ್ 18 ರಂದು ಸಂಜೆ ಫಿರ್ಯಾದಿದಾರರು ಕೆಲಸದ ನಿಮಿತ್ತ ಗೋಕರ್ಣಕ್ಕೆ ಹೊರಟಿದ್ದಾಗ ಆರೋಪಿತ ಮಂಜುನಾಥ ನಾಯಕನು ಅವರನ್ನು ಮಾರಕಲ್ನಿಂದ ಗುಂಡಬಾಳದವರೆಗೆ ಹಿಂಬಾಲಿಸಿಕೊಂಡು ಬಂದು, ಮೊಬೈಲ್ ಫೋನ್ನಲ್ಲಿ ಕೆಟ್ಟ ಪದಗಳನ್ನು ಪ್ರಯೋಗ ಮಾಡಿ. ಅವನ ಹಿಂದೆಯೇ ನಾನು ಇದ್ದೇನೆ, ಇಲ್ಲಿ ಇವನನ್ನು ಮುಗಿಸಿ ಬಿಡೋಣ’ ಎಂದು ಜೋರಾಗಿ ಮಾತನಾಡುತ್ತಾ ಪ್ರಾಣಬೆದರಿಕೆ ಒಡ್ಡಿದ್ದಾನೆ. ಇದರಿಂದ ಗಾಬರಿಗೊಂಡ ಫಿರ್ಯಾದಿದಾರರು ಗುಂಡಬಾಳದ ಜನವಸತಿ ಪ್ರದೇಶದಲ್ಲಿ ನಿಂತು ಪತ್ನಿ ಶಿಲ್ಪಶ್ರೀ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ಆಕೆ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿತನು ಅಲ್ಲಿಂದ ಹೊರಟುಹೋಗಿದ್ದಾನೆ.
ತದನಂತರ ಅದೇ ದಿನ ರಾತ್ರಿ ಫಿರ್ಯಾದಿದಾರರು ಕುಡಿಯುವ ನೀರು ತರಲು ಪಕ್ಕದ ಜಮೀನಿನ ಮಾರ್ಗವಾಗಿ ಹೋಗುತ್ತಿದ್ದಾಗ, ಆರೋಪಿತನು ಅವರ ಮುಖಕ್ಕೆ ಬ್ಯಾಟರಿ ಬೆಳಕು ಚೆಲ್ಲಿ, ‘ನನ್ನ ಜಮೀನಿನಲ್ಲಿ ಓಡಾಡಿದರೆ ನಿನ್ನನ್ನು ಜೀವಂತವಾಗಿರಲು ಬಿಡುವುದಿಲ್ಲ’ ಎಂದು ಮತ್ತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಮರುದಿನ ಜೂನ್ 19 ರಂದು ಫಿರ್ಯಾದಿದಾರರು ಪತ್ನಿಯೊಂದಿಗೆ ಮಗಳನ್ನು ಮಾತನಾಡಿಸಲು ಗಂಗೊಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಸ್ಕೂಲಿಗೆ ಹೋಗುತ್ತಿದ್ದಾಗಲೂ ಆರೋಪಿತನು ಮತ್ತೊಬ್ಬ ವ್ಯಕ್ತಿಯೊಂದಿಗೆ ಬೈಕ್ನಲ್ಲಿ ಸುಮಾರು 30 ಕಿಲೋಮೀಟರ್ಗಳಷ್ಟು ಇವರನ್ನು ಹಿಂಬಾಲಿಸಿಕೊಂಡು ಹೋಗಿ ಭಯ ಹುಟ್ಟಿಸಿದ್ದಾನೆ. ಇದಲ್ಲದೆ, ಫಿರ್ಯಾದಿದಾರರು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಆರೋಪಿತನು ಅವರ ಮನೆಗೆ ಬಂದು, ಅವರ ಪತ್ನಿಗೆ ಅತ್ಯಂತ ಅಸಭ್ಯ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.
ಈ ಕೃತ್ಯಕ್ಕೆ ಆರೋಪಿತನ ಹೆಂಡತಿ ಹಾಗೂ ತಾಯಿ ಕೂಡ ಪ್ರತಿನಿತ್ಯ ಪ್ರಚೋದನೆ ನೀಡುತ್ತಾ ತಮಗೂ ಮತ್ತು ತಮ್ಮ ಹೆಂಡತಿಗೆ ಅವಾಚ್ಯವಾಗಿ ಬೈದು ಬೆದರಿಕೆ ಹಾಕುತ್ತಿದ್ದಾರೆ ಎಂದು ನೊಂದ ರೈತ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಅಂಕೋಲಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.













Leave a Reply