ಗಾಳಿ ತೆಗೆದ ಕೈಗಳೇ ಗಾಳಿ ತುಂಬಿದಾಗ… ಅಂಕೋಲಾದಲ್ಲಿ ಖಾಕಿ ಮತ್ತು ಕಂದಾಯ ಇಲಾಖೆಯ ಯುವ ನೌಕರನ ನಡುವೆ ನಡೆದ ‘ಟೈರ್’ ಹೈಡ್ರಾಮಾ!

ಅಂಕೋಲಾ : ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸರು ವಾಹನಗಳ ಚಕ್ರದ ಗಾಳಿ ತೆಗೆಯುವ ಕೆಲಸಕ್ಕೆ ಇಳಿದರೆ ಏನಾಗಬಹುದು? ಅಂಕೋಲಾದಲ್ಲಿ ಇಂತಹದ್ದೊಂದು ಅಪರೂಪದ, ಸ್ವಾರಸ್ಯಕರ ಹಾಗೂ ಅಷ್ಟೇ ಗಂಭೀರ ಪ್ರಸಂಗವೊಂದು ನಡೆದಿದ್ದು, ಇಡೀ ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಂಕೋಲಾ ಪೊಲೀಸ್ ಠಾಣೆಯ ಎದುರಿರುವ ಮೀನುಗಾರಿಕಾ ಕಚೇರಿಯ ಬಳಿ ಕಂದಾಯ ಇಲಾಖೆಯ ಯುವ ನೌಕರರೊಬ್ಬರು ಯಾವುದೋ ತುರ್ತು ಕೆಲಸದ ನಿಮಿತ್ತ ತಮ್ಮ ಬೈಕ್ ನಿಲ್ಲಿಸಿ ಹೋಗಿದ್ದರು. ಆದರೆ ತಮ್ಮ ಕೆಲಸ ಮುಗಿಸಿ ಹೊರಬಂದು ಬೈಕ್ ನಿಲ್ಲಿಸಿಟ್ಟ ಜಾಗದಲ್ಲಿ ಬಂದು ನೋಡಿದಾಗ, ಬೈಕ್‌ನ ಟೈರ್‌ಗಳ ಗಾಳಿ ಸಂಪೂರ್ಣವಾಗಿ ಮಾಯವಾಗಿ ಬೈಕ್ ನೆಲಕ್ಕೆ ಕಚ್ಚಿಕೊಂಡಿತ್ತು! ಅಕ್ಕಪಕ್ಕದವರ ಬಳಿ ವಿಚಾರಿಸಿದಾಗ, ಅಲ್ಲಿ ಯಾವುದೇ ‘ನೋ ಪಾರ್ಕಿಂಗ್’ ಫಲಕ ಇಲ್ಲದಿದ್ದರೂ ಪೊಲೀಸರೇ ಬಂದು ಬೈಕ್‌ನ ಗಾಳಿ ತೆಗೆದಿದ್ದಾರೆ ಎಂಬ ಅಚ್ಚರಿಯ ಮಾಹಿತಿ ತಿಳಿದುಬಂದಿದೆ.​

ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಜನಸಾಮಾನ್ಯರು ಪೊಲೀಸರೊಂದಿಗೆ ವಾದ ಮಾಡಲು ಹಿಂಜರಿಯುತ್ತಾರೆ. ಆದರೆ ಕಂದಾಯ ಇಲಾಖೆಯ ಆ ಯುವ ನೌಕರ ಅಂತಹ ಜಾಯಮಾನದವರಲ್ಲ. ತಮ್ಮ ನೇರ ನಡೆ, ಖಡಕ್ ಮಾತುಗಾರಿಕೆ ಹಾಗೂ ತಪ್ಪನ್ನು ಕಂಡರೆ ಅಲ್ಲೇ ಪ್ರಶ್ನಿಸುವ ದಿಟ್ಟ ನಿಲುವಿಗೆ ನೌಕರಿಗೆ ಸೇರಿದ ದಿನದಿಂದಲೇ ಹೆಸರಾದವರು. ತಮ್ಮ ವಾಹನದ ಗಾಳಿ ತೆಗೆದಿರುವುದನ್ನು ಕಂಡು ಕೆಂಡಮಂಡಲವಾದ ಅವರು, ಠಾಣೆಯ ಮುಂದೆ ನಿಂತು ಅನಗತ್ಯ ಗಲಾಟೆ ಮಾಡುವ ಬದಲು ಕಾನೂನುಬದ್ಧವಾಗಿಯೇ ಉತ್ತರ ನೀಡಲು ನಿರ್ಧರಿಸಿದರು. ತಕ್ಷಣವೇ ನೇರವಾಗಿ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ಇ-ಮೇಲ್ ಮೂಲಕ ಘಟನೆಯ ಸಂಪೂರ್ಣ ವಿವರಗಳೊಂದಿಗೆ ದೂರನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ .

​ಈ ಘಟನೆಯು ಈಗ ಸಾರ್ವಜನಿಕ ವಲಯದಲ್ಲಿ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾವುದೇ ‘ನೋ ಪಾರ್ಕಿಂಗ್’ ಸೂಚನಾ ಫಲಕವಿಲ್ಲದ ಜಾಗದಲ್ಲಿ ನಿಲ್ಲಿಸಿದ ವಾಹನಗಳ ಗಾಳಿ ತೆಗೆಯುವ ಅಧಿಕಾರವನ್ನು ಪೊಲೀಸರಿಗೆ ನೀಡಿದವರು ಯಾರು? ಒಂದು ವೇಳೆ ನಿಯಮ ಉಲ್ಲಂಘನೆಯಾಗಿದ್ದರೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅದನ್ನು ಬಿಟ್ಟು ಟೈರ್‌ನ ಗಾಳಿ ತೆಗೆಯುವುದು ಎಷ್ಟು ಸರಿ? ತುರ್ತು ಆಸ್ಪತ್ರೆ, ಔಷಧಿ ಅಥವಾ ಇನ್ಯಾವುದೇ ಅಗತ್ಯ ಕೆಲಸಕ್ಕೆ ಬಂದ ನಾಗರಿಕರ ವಾಹನಗಳ ಗಾಳಿ ತೆಗೆದರೆ, ಆ ತುರ್ತು ಸಂದರ್ಭದಲ್ಲಿ ಆಗುವ ಅನಾಹುತಗಳಿಗೆ ಯಾರು ಹೊಣೆ ಎಂಬ ಪ್ರಶ್ನೆಗಳು ಸಾರ್ವಜನಿಕರಿಗೆ ಕಾಡಿದೆ .​

ಇನ್ನು ಈ ಇಡೀ ಪ್ರಕರಣಕ್ಕೆ ಅತ್ಯಂತ ಕುತೂಹಲಕಾರಿ ತಿರುವು ಸಿಕ್ಕಿದ್ದು ಇಂದು. ನಿನ್ನೆ ವಾಹನದ ಗಾಳಿ ತೆಗೆದು ‘ಪವರ್’ ತೋರಿಸಿದ್ದ ಪೊಲೀಸರು, ಯುವ ನೌಕರನ ನೇರ ನಿಲುವಿಗೆ ಮಣಿದರೋ ಅಥವಾ ಮೇಲಾಧಿಕಾರಿಗಳಿಂದ ಬಿಸಿ ತಟ್ಟಿತೋ ಗೊತ್ತಿಲ್ಲ, ಇಂದು ಮತ್ತೆ ಅದೇ ಸ್ಥಳಕ್ಕೆ ಬಂದು ಸ್ವತಃ ತಾವೇ ಮುಂದೆ ನಿಂತು ಬೈಕ್‌ ಗಾಳಿ ತುಂಬಿಸಿದ್ದಾರೆ ಎಂದು ತಿಳಿದುಬಂದಿದೆ! ಗಾಳಿ ತೆಗೆದ ಕೈಗಳೇ ಮತ್ತೆ ಗಾಳಿ ತುಂಬುವ ಮೂಲಕ ಈ ಪ್ರಕರಣಕ್ಕೆ ತೇಪೆ ಹಚ್ಚುವ ಪ್ರಯತ್ನ ನಡೆದಿದೆಯೇ ಎಂಬ ಗುಸುಗುಸು ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಜೋರಾಗಿದೆ.

ಒಟ್ಟಿನಲ್ಲಿ, ಕಂದಾಯ ಇಲಾಖೆ ನೌಕರ ನ ಬೈಕ್ ‘ಗಾಳಿ’ ಪ್ರಕರಣ ಸದ್ಯಕ್ಕೆ ಸುಖಾಂತ್ಯ ಕಂಡಂತೆ ಕಾಣುತ್ತಿದ್ದರೂ,ಆದರೂ ತುರ್ತು ಸಂದರ್ಭದಲ್ಲಿ ವಾಹನಗಳ ಗಾಳಿ ತೆಗೆಯುವ ಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಹಾಗೆಯೇ ಉಳಿದಿವೆ.

Leave a Reply

Your email address will not be published. Required fields are marked *

error: Content is protected !!