ದಾಖಲೆ ಅಲೆದಾಟಕ್ಕೆ ಬ್ರೇಕ್: ಬುದ್ಧಿಮತ್ತೆ, ಶ್ರದ್ಧೆಯಿಂದ ಜನರ ಮನ ಗೆದ್ದ ಯುವ ಅಧಿಕಾರಿ
ಅಂಕೋಲಾ: ಸರ್ಕಾರಿ ಕಚೇರಿಗಳೆಂದರೆ ವಿಳಂಬ, ಸಿಬ್ಬಂದಿ ಕೊರತೆಯ ನೆಪ ಮತ್ತು ಸಾರ್ವಜನಿಕರ ಅಲೆದಾಟ ಎಂಬ ಅಪವಾದಗಳೇ ಹೆಚ್ಚು. ಆದರೆ, ಮನಸ್ಸಿದ್ದರೆ ಒಬ್ಬ ದಕ್ಷ ಅಧಿಕಾರಿ ಇಡೀ ವ್ಯವಸ್ಥೆಯ ಚಿತ್ರಣವನ್ನೇ ಹೇಗೆ ಬದಲಾಯಿಸಬಲ್ಲ ಎಂಬುದಕ್ಕೆ ಅಂಕೋಲಾ ಕಂದಾಯ ಕಚೇರಿಯ ಗ್ರಾಮ ಆಡಳಿತ ಅಧಿಕಾರಿ ಶ್ರೀ ಮೇಘರಾಜ ರಾಥೋಡ್ ಜೀವಂತ ಸಾಕ್ಷಿಯಾಗಿದ್ದಾರೆ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕ ಅಧಿಕಾರಿ ಹೇಗಿರಬೇಕು ಎಂಬುದಕ್ಕೆ ಇವರ ಕಾರ್ಯವೈಖರಿ ಇಡೀ ರಾಜ್ಯದ ಸರ್ಕಾರಿ ನೌಕರರಿಗೆ ಮಾದರಿಯಾಗಿದೆ.
ಹಿಂದೊಮ್ಮೆ ಅಂಕೋಲಾ ಕಂದಾಯ ಕಚೇರಿಯಲ್ಲಿ ‘ಭೂ ಸುರಕ್ಷಾ’ ಯೋಜನೆಯ ಸ್ಕ್ಯಾನಿಂಗ್ ಮತ್ತು ಅಪ್ಲೋಡ್ ವಿಳಂಬದಿಂದಾಗಿ ದಾಖಲೆಗಳು ಸಿಗದೆ ಸಾರ್ವಜನಿಕರು ಪರದಾಡುವಂತಾಗಿತ್ತು. ಆದರೆ, 2025ರ ಗ್ರಾಮ ಆಡಳಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅದೇ ವರ್ಷ ಮೇ ತಿಂಗಳಲ್ಲಿ ಅಂಕೋಲಾಕ್ಕೆ ಕರ್ತವ್ಯಕ್ಕೆ ಹಾಜರಾದ ಈ ಯುವ ಅಧಿಕಾರಿ, ಹೊಸದಾಗಿ ಜಾರಿಗೆ ಬಂದಿದ್ದ ಭೂ ಸುರಕ್ಷಾ ದಾಖಲೆಗಳನ್ನು ಜನರಿಗೆ ತಲುಪಿಸುವ ಕಠಿಣ ಸವಾಲನ್ನು ದಿಟ್ಟವಾಗಿ ಸ್ವೀಕರಿಸಿದರು.ಪ್ರಾರಂಭದ ದಿನಗಳಲ್ಲಿ ಅರ್ಜಿಗಳಿಗೆ ತಕ್ಕಂತೆ ದಾಖಲೆಗಳನ್ನು ಹುಡುಕಿ ತೆಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ಒಂದೊಂದು ಗ್ರಾಮದ ಕಡತ ತೆಗೆದಾಗಲೂ ನೂರಾರು ಪುಟಗಳ ನಡುವೆ ತಡಕಾಡಬೇಕಿತ್ತು. ಯಾವ ಭೂ ಸುರಕ್ಷಾ ಐಡಿಯಲ್ಲಿ ಯಾವ ಎಂಟ್ರಿ ಅಡಗಿದೆ ಎಂಬುದನ್ನು ಪತ್ತೆಹಚ್ಚುವುದೇ ದೊಡ್ಡ ಕಸರತ್ತಾಗಿತ್ತು. ದಾಖಲೆ ಹುಡುಕಲು ತಡವಾದರೆ ಅಥವಾ ಸಿಗದಿದ್ದರೆ ಜನರ ಆಕ್ರೋಶ, ಬೈಗುಳಗಳನ್ನೂ ಎದುರಿಸಬೇಕಾದ ಸಂದರ್ಭಗಳು ಬಂದವು. ಆದರೆ, ಎದೆಗುಂದದ ಮೇಘರಾಜ ರಾಥೋಡ್ ತಮ್ಮ ಬುದ್ಧಿಮತ್ತೆ ಮತ್ತು ಕೆಲಸದ ಶ್ರದ್ಧೆಯಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡರು.

ಈಗಾಗಲೇ ಅಪ್ಲೋಡ್ ಆಗಿದ್ದ 27 ಸಾವಿರಕ್ಕೂ ಹೆಚ್ಚು ದಾಖಲೆಗಳನ್ನು ಖುದ್ದು ಪರಿಶೀಲಿಸಿ, ಪ್ರತಿಯೊಂದು ಭೂ ಸುರಕ್ಷಾ ಐಡಿಯಲ್ಲಿ ಬರುವ ಮ್ಯೂಟೇಷನ್ ಎಂಟ್ರಿ ಮತ್ತು ಎಂಟ್ರಿ ನಂಬರ್ಗಳ ಪ್ರತ್ಯೇಕ ಪಟ್ಟಿಯನ್ನೇ ಸಿದ್ಧಪಡಿಸಿದರು. ಇವರ ಈ ಸಮಯಪ್ರಜ್ಞೆಯಿಂದಾಗಿ ಇಂದು ಸಾರ್ವಜನಿಕರಿಗೆ ಅತ್ಯಂತ ತ್ವರಿತವಾಗಿ ದಾಖಲೆಗಳು ಲಭ್ಯವಾಗುತ್ತಿವೆ.
ಇಂದು ಅಂಕೋಲಾ ಕಚೇರಿಯಲ್ಲಿ ಮೇಘರಾಜ ರಾಥೋಡ್ ಅವರ ಮೇಲೆ ಬರೋಬ್ಬರಿ ನಾಲ್ಕು ವಿಭಾಗಗಳ ಜವಾಬ್ದಾರಿ ಇದೆ. ‘ಭೂ ಸುರಕ್ಷಾ’, ರೆಕಾರ್ಡ್ ರೂಮು, ಜನನ-ಮರಣ ವಿಭಾಗ ಮತ್ತು ಸ್ಕ್ಯಾನಿಂಗ್—ಹೀಗೆ ನಾಲ್ಕು ಕಡೆಯ ಕೆಲಸಗಳನ್ನು ಒಬ್ಬರೇ ಏಕಕಾಲದಲ್ಲಿ ನಿಭಾಯಿಸುತ್ತಿದ್ದಾರೆ. ನಿರ್ವಹಣೆಗೆ ಅತ್ಯಂತ ಕಷ್ಟಕರವಾದ ಭೂ ಸುರಕ್ಷಾ ವ್ಯವಸ್ಥೆಯ ನಡುವೆಯೂ, ಸಿಬ್ಬಂದಿ ಕೊರತೆ ಇದ್ದರೂ ಮೇಲಾಧಿಕಾರಿಗಳ ಆದೇಶದಂತೆ ಎಲ್ಲ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿರುವುದು ಇವರ ಕರ್ತವ್ಯನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ.ಗ್ರಾಮ ಆಡಳಿತ ಅಧಿಕಾರಿಯ ವೇತನದಲ್ಲೇ ನಾಲ್ಕು ಸೆಕ್ಷನ್ಗಳ ಕೆಲಸವನ್ನು ನಿಭಾಯಿಸುತ್ತಿದ್ದರೂ, ಎಳ್ಳಷ್ಟೂ ಬೇಸರವಿಲ್ಲದೆ ಪ್ರಾಮಾಣಿಕತೆ ಮತ್ತು ಸ್ವಾಭಿಮಾನದಿಂದ ಕರ್ತವ್ಯ ನಿರ್ವಹಿಸುತ್ತಿರುವ ಮೂಲತಃ ಧಾರವಾಡದ ಈ ಅಧಿಕಾರಿ ಅಂಕೋಲಾದ ಜನರ ಮನ ಗೆದ್ದಿದ್ದಾರೆ.
ಹೋಬಳಿ ಮಟ್ಟದಲ್ಲೇ ಭೂ ಸುರಕ್ಷಾ ಯೋಜನೆಯ ದಾಖಲೆಗಳನ್ನು ನೀಡುವ ವ್ಯವಸ್ಥೆಯಾದರೆ ತಾಲೂಕು ಕಚೇರಿಯ ಮೇಲಿನ ಒತ್ತಡ ಕಡಿಮೆಯಾಗಿ ಜನರಿಗೆ ಇನ್ನಷ್ಟು ಅನುಕೂಲವಾಗಬಹುದು ಎಂಬುದು ಇವರ ದೂರದೃಷ್ಟಿಯ ಅಭಿಪ್ರಾಯ.
ಸೋಮವಾರ ಅಂಕೋಲಾಕ್ಕೆ ನೂತನ ತಹಶೀಲ್ದಾರರು ಆಗಮಿಸುವ ನಿರೀಕ್ಷೆಯಿದ್ದು, ಕಚೇರಿಯಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಿ ಮೇಘರಾಜ ರಾಥೋಡ್ ಅವರ ಮೇಲಿನ ಕೆಲಸದ ಹೊರೆಯನ್ನು ಇಳಿಸಬೇಕು. ಉಳಿದ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ದಂಡಾಧಿಕಾರಿಗಳ ಕಚೇರಿ ಆಡಳಿತ ಇನ್ನಷ್ಟು ಸುಗಮವಾಗಿ ಸಾಗುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
✍️ಕಿರಣ ಗಾಂವಕರ. ಕ್ರಾಂತಿಕಾರಿ ನ್ಯೂಸ್ ಅಂಕೋಲಾ













Leave a Reply