ಅಂಕೋಲಾ ಬೋಗ್ರಿಬೈಲ್ ಜಮೀನು ಅಕ್ರಮ ಹಗರಣ: ನಾಡುಮಾಸ್ಕೇರಿಯ ದೇವಿದಾಸ ಗುನಗಾ. ಪ್ರೀತಿ ಗುನುಗಾ ನಿರೀಕ್ಷಣಾ ಜಾಮೀನು ಅರ್ಜಿ ವಜಾ.

ಅಂಕೋಲಾ ::ತಾಲೂಕಿನಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬೋಗ್ರಿಬೈಲ್ ಗ್ರಾಮದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಅಕ್ರಮ ನೋಂದಣಿ ಪ್ರಕರಣಕ್ಕೆ (ಅಪರಾಧ ಸಂಖ್ಯೆ: 171/2026) ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಕುಮಟಾ ತಾಲೂಕಿನ ನಾಡುಮಾಸ್ಕೇರಿಯ ದೇವಿದಾಸ ನಾಗೇಶ ಗುನಗಾ ಹಾಗೂ ಅವರ ಪತ್ನಿ ಪ್ರೀತಿ ದೇವಿದಾಸ ಗುನಗಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2026ರ ಸೆಪ್ಟೆಂಬರ್ 21ರಂದು ಪೂರ್ಣವಾಗಿ ವಜಾಗೊಳಿಸಿ ಆದೇಶಿಸಿದೆ.

ಬೋಗ್ರಿಬೈಲ್ ಗ್ರಾಮದ ಸರ್ವೇ ನಂಬರ್ 79/ಅ4 ರ 1 ಎಕರೆ 14 ಗುಂಟೆ ಜಮೀನಿನ ಮೂಲ ಮಾಲೀಕರಾದ ಇಮ್ತಿಯಾಜ್ ಸೈಯದ್ ಮತ್ತು ಅವರ ಸಹೋದರನ ಹೆಸರಿನಲ್ಲಿ ನಕಲಿ ವ್ಯಕ್ತಿಗಳನ್ನು ನಿಲ್ಲಿಸಿ, ನಕಲಿ ಆಧಾರ್ ಕಾರ್ಡ್ ಹಾಗೂ ಸುಳ್ಳು ಸಹಿಗಳನ್ನು ಬಳಸಿ ಅಕ್ರಮವಾಗಿ ನೋಂದಣಿ ಮಾಡಿಕೊಳ್ಳಲಾಗಿತ್ತು. ಈ ಆಸ್ತಿಯನ್ನು ಪ್ರಮುಖ ಆರೋಪಿ ದೇವಿದಾಸ ಗುನಗಾ ತನ್ನ ಹೆಸರಿಗೆ ನೋಂದಾಯಿಸಿಕೊಂಡಿದ್ದರೆ, ಆತನ ಪತ್ನಿ ಪ್ರೀತಿ ಗುನಗಾ ಕ್ರಯದಸ್ತಾವೇಜಿಗೆ ಸಾಕ್ಷಿಯಾಗಿ ಸಹಿ ಮಾಡಿದ್ದರು. ಈ ಭೂ ವಂಚನೆ ಕುರಿತು ಮೂಲ ಮಾಲೀಕರು ನೀಡಿದ ದೂರಿನನ್ವಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ತೀವ್ರ ಸ್ವರೂಪದ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಪರಮೇಶ್ವರ ಪ್ರಸನ್ನ ಬಿ. ಅವರ ಪೀಠವು ತನಿಖಾಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರ ವಾದವನ್ನು ಮಾನ್ಯ ಮಾಡಿದೆ. ಪ್ರಕರಣ ದಾಖಲಾದ ದಿನದಿಂದಲೂ ಆರೋಪಿಗಳು ತಲೆಮರೆಸಿಕೊಂಡು ತನಿಖೆಗೆ ಸಹಕರಿಸದಿರುವುದು, ನಕಲಿ ಸಹಿಗಳ ತಜ್ಞರ ಪರಿಶೀಲನೆ ಹಾಗೂ ತಾಲೂಕಿನಲ್ಲಿ ನಡೆದಿರುವ ಇತರ ಸರಣಿ ಭೂ ಅಕ್ರಮಗಳ ಸತ್ಯಾಸತ್ಯತೆ ಹೊರತರಲು ಆರೋಪಿಗಳ ಕಸ್ಟಡಿ ವಿಚಾರಣೆ (Custodial Interrogation) ಅತ್ಯಗತ್ಯವಾಗಿದೆ ಎಂಬ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಇದು ಸಾರ್ವಜನಿಕ ವ್ಯವಸ್ಥೆಗೆ ಎಸಗಿದ ಗಂಭೀರ ಅಪರಾಧವಾದ್ದರಿಂದ ಮತ್ತು ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಹಾಗೂ ತನಿಖೆಗೆ ಅಡಚಣೆ ಉಂಟುಮಾಡುವ ಸಾಧ್ಯತೆಯಿರುವುದರಿಂದ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿದ್ದು, ಈ ಆದೇಶದಿಂದ ಆರೋಪಿಗಳಿಗೆ ಕಾನೂನು ರಕ್ಷಣೆ ತೆರವಾಗಿದೆ.

ಪೊಲೀಸ್ ತನಿಖೆಯ ಆರಂಭದಲ್ಲಿ ಮೂಲ ದಾಖಲೆಗಳ ಆಧಾರದ ಮೇಲೆ 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ, ವಿಚಾರಣೆ ವೇಳೆ ಕೆಲವು ಅಮಾಯಕ ಸಾರ್ವಜನಿಕರ ಆಧಾರ್ ಕಾರ್ಡ್‌ಗಳನ್ನು ಅವರ ಅರಿವಿಗೇ ಬಾರದಂತೆ ದುರುಪಯೋಗಪಡಿಸಿಕೊಂಡು, ನಕಲಿ ಸಹಿ ಹಾಕಿರುವುದು ಪತ್ತೆಯಾಗಿದೆ. ಮುಂದುವರೆದು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಪ್ರಕರಣದ ಪ್ರಮುಖ 5 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಅವರಿಗೆ ನ್ಯಾಯಾಲಯವು ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಜೊತೆಗೆ ಮತ್ತಿಬ್ಬರು ಆರೋಪಿಗಳನ್ನು fir ನಲ್ಲಿ ಸೇರ್ಪಡೆಗೊಳಿಸಲಾಗಿದೆ.

ಪ್ರಕರಣದ ತನಿಖೆ ಆಳಕ್ಕಿಳಿದಂತೆ ದೇವಿದಾಸ ಗುನಗಾ ವಿರುದ್ಧ ದಾಖಲಾಗಿರುವ ಬೊಗರಿಬೈಲ್ ಪ್ರಕರಣದ ಜಮೀನು ಖರೀದಿ ಮಾತ್ರವಲ್ಲದೆ. ತಾಲೂಕಿನ ತಳಗದ್ದೆ ಜಮೀನು ಕೂಡ ಭೂ ಮಾಫಿಯಾ ವಂಚಕರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದ್ದು. ಸದರಿ ಜಮೀನನ್ನು ಸಹ ದೇವಿದಾಸ ಗುನಗಾ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ.ನಿರೀಕ್ಷಣ ಜಾಮೀನು ರದ್ದಾಗಿರುವುದರಿಂದ ದೇವಿದಾಸ ದಂಪತಿಗಳಿಗೆ ಬಂಧನ ಬಿತಿ ಎದುರಾಗಿದೆ.

ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಬೋಗ್ರಿಬೈಲ್ ಹಾಗೂ ತಳಗದ್ದೆ ಗ್ರಾಮದ ಜಮೀನುಗಳಿಗೆ ಸಂಬಂಧಿಸಿದಂತೆ ಮೂಲ ಮಾಲೀಕರ ಗಮನಕ್ಕೆ ಬಾರದಂತೆ. ನಕಲಿ ವ್ಯಕ್ತಿಗಳು.ನಕಲಿ ಆಧಾರ್ ಕಾರ್ಡ್‌ ಬಳಸಿ ಸೃಷ್ಟಿಸಲಾದ 7ಕ್ಕೂ ಹೆಚ್ಚು ಅಕ್ರಮ ಕ್ರಯ ದಸ್ತಾವೇಜುಗಳನ್ನು ಅಂಕೋಲಾದ ಒಬ್ಬರೇ ವಕೀಲರು ಬರೆದು ಸಿದ್ಧಪಡಿಸಿದ್ದಾರೆ. ಈ ಎಲ್ಲಾ ಅಕ್ರಮ ದಸ್ತಾವೇಜುಗಳನ್ನು ಬರೆದ ವಕೀಲರು ಕಾನೂನಿನ ಕುಣಿಕೆಯಿಂದ ಹೇಗೆ ನುಣುಚಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಯಕ್ಷಪ್ರಶ್ನೆಯಾಗಿ ಹೊರಹೊಮ್ಮಿದೆ..

✍️ಕಿರಣ ಗಾಂವಕರ. ಕ್ರಾಂತಿಕಾರಿ ನ್ಯೂಸ್. ಅಂಕೋಲಾ

Leave a Reply

Your email address will not be published. Required fields are marked *

error: Content is protected !!