ವರುಣನ ಅಬ್ಬರಕ್ಕೂ ಕುಗ್ಗದ ದೇಶಭಕ್ತಿ: ಅಂಕೋಲಾ ತಾಲೂಕಿನಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದ ಸಡಗರ

ವರುಣನ ಅಬ್ಬರಕ್ಕೂ ಕಗ್ಗದ ದೇಶಭಕ್ತಿ: ಅಂಕೋಲಾ ತಾಲೂಕಿನಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದ ಸಡಗರ.

ಅಂಕೋಲಾದಲ್ಲಿ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮಳೆಯ ನಡುವೆಯೂ ಅತ್ಯಂತ ಸಡಗರ ಮತ್ತು ದೇಶಭಕ್ತಿಯಿಂದ ಜರುಗಿತು. ತಾಲೂಕು ಆಡಳಿತ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ಈ ಸುದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.​ಬೆಳಿಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದರೂ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರ ದೇಶಭಕ್ತಿಯ ಉತ್ಸಾಹಕ್ಕೆ ಯಾವುದೇ ಅಡೆತಡೆ ಉಂಟಾಗಲಿಲ್ಲ. ತಾಲೂಕಿನ ದಂಡಾಧಿಕಾರಿಗಳು, ಪುರಸಭೆ ಅಧಿಕಾರಿಗಳು, ರಾಜಕೀಯ ಮುಖಂಡರು, ಸಾಹಿತಿಗಳು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆ ಮೂಲಕ ಆಕರ್ಷಕ ಮೆರವಣಿಗೆ ನಡೆಸಿದರು.

“ಭಾರತಾಂಬೆಗೆ ಜೈ” ಎಂಬ ಘೋಷಣೆಗಳೊಂದಿಗೆ ಸಾಗಿದ ಈ ಪಥಸಂಚಲನವು ಪುರಸಭೆಯ ಆವರಣಕ್ಕೆ ತಲುಪಿತು. ಅಂಕೋಲಾ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಪೊಲೀಸರು ಸುಗಮ ಸಂಚಾರ ಹಾಗೂ ಭದ್ರತಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.​ಪುರಸಭೆ ಆವರಣದಲ್ಲಿ ಮುಖ್ಯಾಧಿಕಾರಿ ಯೇಸು ಎಸ್. ಬೆಂಗಳೂರು ಅವರು ಧ್ವಜಾರೋಹಣ ನೆರವೇರಿಸಿದರು. ಜೈ ಹಿಂದ್ ಹೈಸ್ಕೂಲ್ ವಿದ್ಯಾರ್ಥಿಗಳ ಬ್ಯಾಂಡ್ ತಂಡದ ರಾಷ್ಟ್ರಗೀತೆ ವಾದನ ಕಾರ್ಯಕ್ರಮಕ್ಕೆ ಮೆರುಗು ನೀಡಿತು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಾಧಿಕಾರಿಗಳು, ಅಂಕೋಲಾದ ಐತಿಹಾಸಿಕ ಪರಂಪರೆ, ಹೋರಾಟಗಾರರ ತ್ಯಾಗ ಮತ್ತು ದೇಶದ ರಾಜಕೀಯ, ಆರ್ಥಿಕ ಹಾಗೂ ತಾಂತ್ರಿಕ ಪ್ರಗತಿಯನ್ನು ಸ್ಮರಿಸಿದರು. ಸೈನಿಕರು ಮತ್ತು ರೈತರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.

​ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದ ಆವರಣದಲ್ಲಿ ತಾಲೂಕು ದಂಡಾಧಿಕಾರಿ ನಿಶ್ಚಲ್ ನರೋನಾ ಅವರು ಮಹಾತ್ಮ ಗಾಂಧೀಜಿ ಹಾಗೂ ಹೋರಾಟಗಾರರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ‘ಕರ್ನಾಟಕದ ಬಾರ್ಡೋಲಿ’ ಎಂದೇ ಹೆಸರಾದ ಅಂಕೋಲಾದ ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ನೆನಪಿಸಿದ ಅವರು, ಜಾತಿ, ಧರ್ಮ ಮತ್ತು ಗಡಿಗಳ ಎಲ್ಲೆಯನ್ನು ಮೀರಿ ವಿವಿಧತೆಯಲ್ಲಿ ಏಕತೆ ಹಾಗೂ ದೇಶದ ಸಮಗ್ರತೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕರೆ ನೀಡಿದರು. ಮಳೆಯ ನಡುವೆಯೂ ಪ್ರದರ್ಶಿತಗೊಂಡ ಜನಸ್ತೋಮದ ಈ ದೇಶಭಕ್ತಿ ಪ್ರತಿಯೊಬ್ಬರಲ್ಲೂ ಹೆಮ್ಮೆ ಮೂಡಿಸಿತು.

✍️ಕಿರಣ ಗಾಂವಕರ. ಕ್ರಾಂತಿಕಾರಿ ನ್ಯೂಸ್. ಅಂಕೋಲಾ.

Leave a Reply

Your email address will not be published. Required fields are marked *

error: Content is protected !!