ಮಂಗಳೂರಿನಲ್ಲಿ ಪ್ರಸ್ತಾಪಿತ ಉಚ್ಚ ನ್ಯಾಯಾಲಯದ ಪೀಠವನ್ನು ಸ್ಥಾಪಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆ ಇದ್ದಲ್ಲಿ, ಜಿಲ್ಲೆಯ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಾಗೂ ಉಚ್ಚ ನ್ಯಾಯಾಲಯವು ಈ ವಿಚಾರವನ್ನು ಪುನರ್ಪರಿಶೀಲಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಕ್ಷಕರ ಘಟಕ, ಉತ್ತರ ಕನ್ನಡ ಜಿಲ್ಲೆ ಆಗ್ರಹಿಸಿದೆ.ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಿಗೆ ದಾರವಾಡವು ಮಂಗಳೂರಿಗಿಂತ ಹತ್ತಿರವಾಗಿದ್ದು, ಜಿಲ್ಲೆಯ ಅನೇಕ ಕಕ್ಷಿದಾರರು ಈಗಾಗಲೇ ದಾರವಾಡದ ವಕೀಲರ ಮೂಲಕ ತಮ್ಮ ನ್ಯಾಯಾಂಗ ಪ್ರಕರಣಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ತರ ಕನ್ನಡವನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಿ, ಪ್ರಕರಣಗಳನ್ನು ಮಂಗಳೂರಿಗೆ ಸ್ಥಳಾಂತರಿಸುವುದರಿಂದ ಸಾಮಾನ್ಯ ಜನರಿಗೆ ಅನಗತ್ಯವಾದ ಪ್ರಯಾಣದ ತೊಂದರೆ, ಹೆಚ್ಚುವರಿ ಹಣದ ಖರ್ಚು ಮತ್ತು ಸಮಯದ ನಷ್ಟ ಉಂಟಾಗುವ ಸಾಧ್ಯತೆ ಇದೆ.ವಿಶೇಷವಾಗಿ ಬಡವರು, ರೈತರು, ಕಾರ್ಮಿಕರು ಹಾಗೂ ಗ್ರಾಮೀಣ ಪ್ಸೂರ್ವೆಶದ ಸಾಮಾನ್ಯ ಕಕ್ಷಿದಾರರು ನ್ಯಾಯಕ್ಕಾಗಿ ದೂರದ ಮಂಗಳೂರಿಗೆ ಪದೇಪದೇ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ಅದು ಅವರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ. ಈಗಾಗಲೇ ದಾರವಾಡದಲ್ಲಿ ತಮ್ಮ ಪ್ರಕರಣಗಳನ್ನು ನಡೆಸುತ್ತಿರುವ ಕಕ್ಷಿದಾರರು ತಮ್ಮ ವಕೀಲರನ್ನು ಮಂಗಳೂರಿಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದರೆ, ವಕೀಲರ ಪ್ರಯಾಣ ಮತ್ತು ಇತರ ಖರ್ಚುಗಳೂ ಹೆಚ್ಚಾಗಲಿವೆ.ನ್ಯಾಯ ಎಲ್ಲರಿಗೂ ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ದೊರೆಯಬೇಕು ಎಂಬುದು ನ್ಯಾಯಾಂಗ ವ್ಯವಸ್ಥೆಯ ಮೂಲ ಉದ್ದೇಶ. ಆದ್ದರಿಂದ ಆಡಳಿತಾತ್ಮಕ ಅನುಕೂಲಕ್ಕಿಂತಲೂ ಜನಸಾಮಾನ್ಯರ ಅನುಕೂಲ, ಭೌಗೋಳಿಕ ಸಮೀಪತೆ ಮತ್ತು ಬಡ ಕಕ್ಷಿದಾರರ ಹಿತಾಸಕ್ತಿಯನ್ನು ಮುಖ್ಯವಾಗಿ ಪರಿಗಣಿಸಬೇಕಾಗಿದೆ.ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತುತ ಇರುವಂತೆ ದಾರವಾಡ ಉಚ್ಚ ನ್ಯಾಯಾಲಯದ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸುವುದು ಸೂಕ್ತ ಎಂಬುದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಕ್ಷಕರ ಘಟಕ, ಉತ್ತರ ಕನ್ನಡ ಜಿಲ್ಲೆಯ ಅಭಿಪ್ರಾಯವಾಗಿದೆ.ಒಂದು ವೇಳೆ ಉತ್ತರ ಕನ್ನಡವನ್ನು ದಾರವಾಡ ಪೀಠದ ವ್ಯಾಪ್ತಿಯಲ್ಲಿ ಮುಂದುವರಿಸುವುದು ಸಾಧ್ಯವಿಲ್ಲದ ಪರಿಸ್ಥಿತಿ ಇದ್ದಲ್ಲಿ, ಕುಮಟಾ, ಹೊನ್ನಾವರ ಅಥವಾ ಭಟ್ಕಳದಂತಹ ಸೂಕ್ತ ಸ್ಥಳದಲ್ಲಿ ಉಚ್ಚ ನ್ಯಾಯಾಲಯದ ಪೀಠವನ್ನು ಸ್ಥಾಪಿಸುವ ಸಾಧ್ಯತೆಯನ್ನು ಸರ್ಕಾರ ಮತ್ತು ಉಚ್ಚ ನ್ಯಾಯಾಲಯವು ಗಂಭೀರವಾಗಿ ಪರಿಶೀಲಿಸಬೇಕು.ಉತ್ತರ ಕನ್ನಡ ಜಿಲ್ಲೆಯ ಜನರಿಗೆ ನ್ಯಾಯ ದೊರಕುವ ಪ್ರಕ್ರಿಯೆ ಮತ್ತಷ್ಟು ಸುಲಭವಾಗಬೇಕು. ಯಾವುದೇ ಕಾರಣಕ್ಕೂ ನ್ಯಾಯಕ್ಕಾಗಿ ಜನರು ಹೆಚ್ಚಿನ ದೂರ ಪ್ರಯಾಣಿಸಿ, ಹೆಚ್ಚುವರಿ ಹಣ ಮತ್ತು ಸಮಯ ವ್ಯಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು.ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಉತ್ತರ ಕನ್ನಡ ಜಿಲ್ಲೆಯ ಜನರ ಭಾವನೆ ಮತ್ತು ಹಿತಾಸಕ್ತಿಯನ್ನು ಪರಿಗಣಿಸಿ, ಜಿಲ್ಲೆಯನ್ನು ಮಂಗಳೂರು ಪ್ರಸ್ತಾಪಿತ ಪೀಠದ ವ್ಯಾಪ್ತಿಗೆ ಸೇರಿಸದೆ ದಾರವಾಡ ಪೀಠದಲ್ಲೇ ಮುಂದುವರಿಸುವಂತೆ ಮನವಿ ಮಾಡಲಾಗಿದೆ.ಉತ್ತರ ಕನ್ನಡದ ಜನರಿಗೆ ಹತ್ತಿರದಲ್ಲೇ ನ್ಯಾಯ ದೊರೆಯುವ ವ್ಯವಸ್ಥೆ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ. ಸಾಧ್ಯವಾದರೆ ಉತ್ತರ ಕನ್ನಡದಲ್ಲೇ ಉಚ್ಚ ನ್ಯಾಯಾಲಯದ ಪೀಠ ಸ್ಥಾಪನೆಯಾಗಬೇಕು; ಇಲ್ಲವಾದರೆ ದಾರವಾಡ ಪೀಠದಲ್ಲೇ ಜಿಲ್ಲೆಯನ್ನು ಮುಂದುವರಿಸಬೇಕು ಎಂಬುದು ನಮ್ಮ ಸ್ಪಷ್ಟ ನಿಲುವಾಗಿದೆ.
— ನಾರಾಯಣ ನಾಯಕ್ ಸೂರ್ವೆ. ಜಿಲ್ಲಾ ಅಧ್ಯಕ್ಷರುಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಕ್ಷಕರ ಘಟಕ, ಉತ್ತರ ಕನ್ನಡ ಜಿಲ್ಲೆ
ಉತ್ತರ ಕನ್ನಡ ಜಿಲ್ಲೆಯ ಜನರಿಗೆ ನ್ಯಾಯ ದೂರವಾಗದಿರಲಿ-ನಾರಾಯಣ ನಾಯಕ್ ಸೂರ್ವೆ.












Leave a Reply