ಅಂಕೋಲಾ ತಾಲೂಕು ‘ಕಾರ್ಯನಿರತ ಪತ್ರಕರ್ತರ ಧ್ವನಿ’ ಸಂಘದಿಂದ ಪತ್ರಿಕಾ ದಿನಾಚರಣೆ: ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ – ಗಿರೀಶ ನಾಯಕ.

ಅಂಕೋಲಾ ತಾಲೂಕು ‘ಕಾರ್ಯನಿರತ ಪತ್ರಕರ್ತರ ಧ್ವನಿ’ ಸಂಘದಿಂದ ಪತ್ರಿಕಾ ದಿನಾಚರಣೆ:

ಅಂಕೋಲಾ:ಜುಲೈ26. ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಎತ್ತಿತೋರಿಸುವ ಜೊತೆಗೆ ಉತ್ತಮ ಕೆಲಸಗಳನ್ನು ಬೆಳಕಿಗೆ ತಂದು ಪ್ರೋತ್ಸಾಹ ನೀಡುವ ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ. ಪ್ರತಿದಿನ ಹಲವಾರು ಸವಾಲುಗಳನ್ನು ಎದುರಿಸಿ ವರದಿಗಳನ್ನು ಮಾಡುವ ಪತ್ರಕರ್ತರ ಕೆಲಸ ಸುಲಭವಲ್ಲ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗಿರೀಶ ನಾಯಕ ಹೇಳಿದರು.

ಕಾರ್ಯನಿರತ ಪತ್ರಕರ್ತರ ಧ್ವನಿ ಅಂಕೋಲಾ ತಾಲೂಕು ಸಂಘದ (ರಿ) ವತಿಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕಾ ವರದಿಗಳು ಸಮಾಜದಲ್ಲಿ ಅಸಹಾಯಕರಿಗೆ ನೆರವಿನ ಹಸ್ತ ದೊರಕುವಂತೆ ಮಾಡುವಲ್ಲಿ ಮತ್ತು ಸೌಲಭ್ಯ ವಂಚಿತರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಅತ್ಯಂತ ಅನುಕೂಲಕರವಾಗಿವೆ. ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಅಂಕೋಲಾ ತಾಲೂಕಿನಲ್ಲಿ ಪತ್ರಕರ್ತರು ನಿಷ್ಪಕ್ಷಪಾತ ವರದಿಗಾರಿಕೆಯ ಮೂಲಕ ತಮ್ಮದೇ ಆದ ವಿಶೇಷ ಗುರುತನ್ನು ಪಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ “ಹೆಣ್ಣು ಮಕ್ಕಳ ಕಾಳಜಿಯಲ್ಲಿ ಮಾಧ್ಯಮಗಳ ಪಾತ್ರ” ವಿಷಯದ ಕುರಿತು ಉಪನ್ಯಾಸ ನೀಡಿದ ಕಾರ್ಯನಿರತ ಪತ್ರಕರ್ತರ ಧ್ವನಿ ಅಂಕೋಲಾ ತಾಲೂಕು ಘಟಕದ ಅಧ್ಯಕ್ಷ ಮಾರುತಿ ಹರಿಕಂತ್ರ ಅವರು, ಪತ್ರಿಕೆಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಕಾನೂನು ಸಲಹೆಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ವಿಶೇಷ ಅಂಕಣಗಳು ಹಾಗೂ ತಜ್ಞರ ಸಲಹೆಗಳು ನಿಯಮಿತವಾಗಿ ಪ್ರಕಟವಾಗುತ್ತವೆ. ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆದುಕೊಳ್ಳಲು ಪತ್ರಿಕೆ ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು. ಅಲ್ಲದೆ, ಹೆಣ್ಣುಮಕ್ಕಳ ಸುರಕ್ಷತೆಗೆ ಸಂವಿಧಾನ, ಭಾರತೀಯ ದಂಡ ಸಂಹಿತೆ ಮತ್ತು ಆರಕ್ಷಕ ಕಾಯ್ದೆಗಳ ಅಡಿಯಲ್ಲಿ ವಿಶೇಷ ಅವಕಾಶಗಳಿದ್ದು, ದೈಹಿಕ ಹಾಗೂ ಮಾನಸಿಕ ಕಿರುಕುಳಗಳ ವಿರುದ್ಧ ಧ್ವನಿ ಎತ್ತುವ ಮತ್ತು ಪ್ರತಿಭಟಿಸುವ ಹಕ್ಕು ಹೆಣ್ಣುಮಕ್ಕಳಿಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ನಿಲಯ ಪಾಲಕ ಶಿವಾನಂದ ನಾಯ್ಕ ಮಾತನಾಡಿ, ಸಮಾಜದಲ್ಲಿ ಧನಾತ್ಮಕ ಪರಿವರ್ತನೆ ತರುವ ಶಕ್ತಿ ಪತ್ರಕರ್ತರ ಲೇಖನಿಗಿದೆ. ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನರು ಸಾಮಾಜಿಕ ಜಾಲತಾಣಗಳ ಮೇಲಿನ ಒಲವನ್ನು ಕಡಿಮೆ ಮಾಡಿ, ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಲಾಖೆಯ ಸುತ್ತೋಲೆಯಂತೆ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರತಿದಿನ ಓದಲು ಪತ್ರಿಕೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಅವರನ್ನು ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪತ್ರಿಕೆಗಳಲ್ಲಿ ಸಿಗುವ ಜ್ಞಾನ ಭಂಡಾರ ಬೇರೆ ಎಲ್ಲೂ ಸಿಗಲು ಸಾಧ್ಯವಿಲ್ಲ. ಇಂದು ಪತ್ರಿಕೆಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಬೇಸರದ ಸಂಗತಿಯಾಗಿದ್ದು, ವಿದ್ಯಾರ್ಥಿಗಳು ವಿಶಾಲ ಜ್ಞಾನಕ್ಕಾಗಿ ಪತ್ರಿಕೋದ್ಯಮದತ್ತ ಗಮನ ಹರಿಸಬೇಕು ಎಂದರು.

​ಕಾರ್ಯಕ್ರಮದಲ್ಲಿ ಪತ್ರಕರ್ತ ವಿಲಾಸ ನಾಯಕ ಸ್ವಾಗತಿಸಿದರೆ, ನಾಗರಾಜ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ಗಾಂವಕರ ಹಾಗೂ ವಿದ್ಯಾಧರ ಮೊರಬಾ ಅವರುಗಳು ಅತಿಥಿಗಳನ್ನು ಪರಿಚಯಿಸಿದರು. ಸುಪ್ರಿಯಾ ನಾಯ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು ಮತ್ತು ನಾಗರಾಜ ರಾಯ್ಕರ ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!