ವಂದಿಗೆ ಪಂಚಾಯತ್ನಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ: ಬಿಕೋ ಎನ್ನುತ್ತಿರುವ ಕಚೇರಿ, ಕುಂಠಿತಗೊಳ್ಳುತ್ತಿದೆ ಗ್ರಾಮದ ಅಭಿವೃದ್ಧಿ
.*ಅಂಕೋಲಾ: ಹಳ್ಳಿಗಳ ಅಭಿವೃದ್ಧಿಯೇ ನಾಡಿನ ಏಳಿಗೆ ಎಂಬ ಘೋಷಣೆಗಳು ಕೇವಲ ಕಾಗದದ ಮೇಲಷ್ಟೇ ಉಳಿದಿವೆಯೇ ಎನ್ನುವ ಪ್ರಶ್ನೆ ಅಂಕೋಲಾ ತಾಲೂಕಿನ ವಂದಿಗೆ ಗ್ರಾಮ ಪಂಚಾಯಿತಿಯ ಇಂದಿನ ವಾಸ್ತವ ಸ್ಥಿತಿಯನ್ನು ನೋಡಿದಾಗ ಯಾರಿಗಾದರೂ ಕಾಡದಿರದು. ಇತ್ತೀಚೆಗೆ ವಂದಿಗೆ ಪಂಚಾಯಿತಿಗೆ ಆಕಸ್ಮಿಕ ಭೇಟಿ ನೀಡಿದಾಗ ಕಂಡ ದೃಶ್ಯಗಳು ಆಡಳಿತ ವ್ಯವಸ್ಥೆಯ ಅಸ್ತವ್ಯಸ್ತತೆಯನ್ನು ಎತ್ತಿ ತೋರಿಸುವಂತಿದ್ದವು.

ಇಡೀ ಪಂಚಾಯತ್ ವ್ಯವಸ್ಥೆಯೇ ಸಿಬ್ಬಂದಿಗಳ ತೀವ್ರ ಕೊರತೆಯಿಂದಾಗಿ ಹಳಿ ತಪ್ಪಿದಂತಿದ್ದು, ಜನಸಾಮಾನ್ಯರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ.ಪ್ರಸ್ತುತ ಈ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳಾಗಿ ಓಂಕಾರ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಒಬ್ಬ ಪಿಡಿಒ ಎಷ್ಟೇ ಶ್ರಮವಹಿಸಿದರೂ ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದ ತಾಂತ್ರಿಕ ಮತ್ತು ಆಡಳಿತಾತ್ಮಕ ಸಿಬ್ಬಂದಿಗಳೇ ಇಲ್ಲದಿರುವುದು ದೊಡ್ಡ ಹಿನ್ನಡೆಯಾಗಿದೆ.
ಇನ್ನು ಪಂಚಾಯಿತಿ ಕಾರ್ಯದರ್ಶಿ ಮಧುಕರ ಆಗೇರ್ ಅವರ ಮೇಲೆ ಹೆಚ್ಚಿನ ಒತ್ತಡವಿದ್ದು, ಇವರಿಗೆ ಅಗ್ರಗೋಣ ಪಂಚಾಯಿತಿಯ ಜವಾಬ್ದಾರಿಯ ಜೊತೆಗೆ ವಂದಿಗೆ ಪಂಚಾಯಿತಿಯ ಹೆಚ್ಚುವರಿ ಹೊಣೆಯನ್ನೂ ನೀಡಲಾಗಿದೆ. ಅಗ್ರಗೋಣದಿಂದ ಅಂಕೋಲಾ ಸುಮಾರು 15 ಕಿಲೋಮೀಟರ್ ದೂರವಿದ್ದು, ಇವರು ಒಂದು ದಿನ ಅಗ್ರಗೋಣದಲ್ಲಿ ಕೆಲಸ ನಿರ್ವಹಿಸಿದರೆ ಇನ್ನೊಂದು ದಿನ ವಂದಿಗೆಗೆ ಬರಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಒಬ್ಬರೇ ಅಧಿಕಾರಿ ಎರಡು ಪಂಚಾಯಿತಿಗಳ ನಡುವೆ ಓಡಾಡುತ್ತಾ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳು ನಿಗದಿತ ಸಮಯದಲ್ಲಿ ಲಭ್ಯವಾಗುತ್ತಿಲ್ಲ
.ಪಂಚಾಯಿತಿಯ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಅತ್ಯಗತ್ಯವಾಗಿ ಬೇಕಾದ *ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್, ಸಿಪಾಯಿ ಮತ್ತು ಅಕೌಂಟೆಂಟ್* ಹೀಗೆ ಎಲ್ಲಾ ಪ್ರಮುಖ ಹುದ್ದೆಗಳು ಖಾಲಿ ಇವೆ. ಕಚೇರಿಗೆ ಭೇಟಿ ನೀಡಿದಾಗ ಕಂಡುಬಂದಿದ್ದು ಕೇವಲ ಮೂವರು ಸಿಬ್ಬಂದಿಗಳು ಮಾತ್ರ.
ಜಿಲ್ಲಾ ಪಂಚಾಯತ್ನಿಂದ ಅನುಮೋದನೆ ಪಡೆದ ಸ್ವಚ್ಛತೆಗಾರ ನಾಗೇಂದ್ರ ಗೌಡ ಅವರು ತಮ್ಮ ಮೂಲ ಕೆಲಸದ ಜೊತೆಗೆ ಅನಿವಾರ್ಯವಾಗಿ ಕಚೇರಿಯ ಇತರೆ ಕೆಲಸಗಳಿಗೂ ಕೈಜೋಡಿಸುತ್ತಿದ್ದಾರೆ.
ನೀರಿನ ಸಮಸ್ಯೆಯನ್ನು ನಿರ್ವಹಿಸಲು ನಾಗೇಶ್ ಎಂಬುವವರು ತಾತ್ಕಾಲಿಕವಾಗಿ ವಾಟರ್ ಮ್ಯಾನ್ ಆಗಿ ದುಡಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ . ಇವರ ಹೊರತಾಗಿ ನರೇಗಾ ಯೋಜನೆ ಅಡಿ ಮೇಟಿ ಕೆಲಸ ನಿರ್ವಹಿಸುವ ಮಹಿಳಾ ಸಿಬ್ಬಂದಿ ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ನಿಯೋಜಿತರಾದ ಅಂಗವಿಕಲ ಕಾರ್ಯಕರ್ತೆ ಮಾತ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಒಂದು ಕಡೆ ಪಿಡಿಒ ಕಚೇರಿಯ ಕೆಲಸದ ನಿಮಿತ್ತ ಹೊರಹೋದರೆ, ಇನ್ನೊಂದೆಡೆ ಕಾರ್ಯದರ್ಶಿಯವರು ಬೇರೆ ಪಂಚಾಯಿತಿಯ ಜವಾಬ್ದಾರಿಯಲ್ಲಿ ಇರುತ್ತಾರೆ. ಇಂತಹ ಸಮಯದಲ್ಲಿ ಪಂಚಾಯಿತಿ ಕಚೇರಿ ಕೇವಲ ಸ್ವಚ್ಛತೆಗಾರರು ಮತ್ತು ಹೊರಗುತ್ತಿಗೆ ನೌಕರರಿಂದ ಕೂಡಿ ಜನರಿಲ್ಲದೆ ಬಿಕೋ ಎನ್ನುತ್ತಿರುತ್ತದೆ.
ನಾವು ಸಾಮಾನ್ಯವಾಗಿ ಅಭಿವೃದ್ಧಿ ಕೆಲಸಗಳು ವೇಗವಾಗಿ ಆಗುತ್ತಿಲ್ಲ ಎಂದು ಪಂಚಾಯತ್ ವ್ಯವಸ್ಥೆಯನ್ನು ಪ್ರಶ್ನಿಸುತ್ತೇವೆ, ಆದರೆ ಕನಿಷ್ಠ ಮಟ್ಟದ ಸಿಬ್ಬಂದಿಗಳೇ ಇಲ್ಲದ ಕಚೇರಿಯಲ್ಲಿ ವ್ಯವಸ್ಥಿತವಾಗಿ ಕೆಲಸ ನಡೆಯಲು ಹೇಗೆ ಸಾಧ್ಯ ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆಯಾಗಿದೆ.ಜಿಲ್ಲಾ ಪಂಚಾಯತ್ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಈ ಕೂಡಲೇ ಈ ಸಮಸ್ಯೆಯತ್ತ ಗಮನಹರಿಸಬೇಕಿದೆ.
ಅಂಕೋಲಾ ತಾಲೂಕಿನ ಇಂತಹ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕನಿಷ್ಠ ಪಕ್ಷ ಹೊರಗುತ್ತಿಗೆ ಆಧಾರದ ಮೇಲಾದರೂ ಸಿಬ್ಬಂದಿಗಳನ್ನು ತಕ್ಷಣ ನೇಮಕ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಆಡಳಿತ ಯಂತ್ರಕ್ಕೆ ಮರುಜೀವ ನೀಡಿ, ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಬೇಕೆಂದು ವಂದಿಗೆ ಗ್ರಾಮಸ್ಥರು ಬಲವಾಗಿ ಆಗ್ರಹಿಸುತ್ತಿದ್ದಾರೆ.
ವರದಿ :ಕಿರಣ ಗಾಂವಕರ ✍️













Leave a Reply