
ಪವಾಡವೋ ಅಥವಾ ಪ್ರಮಾದವೋ? ವಕೀಲರಾದ ಶ್ರೀ ವಿನೋದ್ ಅವರನ್ನೇ ಕಾಗದದಲ್ಲಿ ಮಹಿಳೆಯನ್ನಾಗಿ ಸೃಷ್ಟಿಸಿದ ಅಂಕೋಲಾದ ಹೆಸ್ಕಾಂ ಅಧಿಕಾರಿಗಳು.
ಅಂಕೋಲಾ: ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತವೆ ಎಂಬುದು ಹಳೆಯ ಮಾತು. ಆದರೆ ಅಂಕೋಲಾದ ಹೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳು ಎಷ್ಟು ವೇಗವಾಗಿದ್ದಾರೆ ಎಂದರೆ, ನಾನು ಸಲ್ಲಿಸಿದ ಒಂದೇ ಒಂದು ಆರ್‌ಟಿಐ (RTI) ಅರ್ಜಿಯಿಂದಾಗಿ ಅಲ್ಲಿನ ಕಡತಗಳಲ್ಲಿರುವ ವ್ಯಕ್ತಿಯ ಲಿಂಗವನ್ನೇ ಬದಲಿಸಿಬಿಟ್ಟಿದ್ದಾರೆ! ಇದು ಕೇಳಲು ಯಾವುದೋ ಸಿನಿಮಾದ ಕಥೆಯಂತೆ ಕಂಡರೂ, ಇದು ನನಗೆ ಹೆಸ್ಕಾಂ ಅಧಿಕಾರಿಗಳು ನೀಡಿದ ಅಧಿಕೃತ ‘ಉತ್ತರ’ದ ಅಸಲಿ ಕಥೆ.
ಕಥೆ ಶುರುವಾಗುವುದು ಹೀಗೆ; ನಾನು ದಿನಾಂಕ 29-01-2026 ರಂದು ಹೆಸ್ಕಾಂ ಉಪವಿಭಾಗಕ್ಕೆ ಒಂದು ಮಾಹಿತಿ ಹಕ್ಕು ಅರ್ಜಿಯನ್ನು ಸಲ್ಲಿಸಿದೆ. ಅದರಲ್ಲಿ ನಾನು ಕೇಳಿದ್ದು ವಕೀಲರಾದ ಶ್ರೀ ವಿನೋದ್ ವಿಠ್ಠಲ ಶಾನ್ಭಾಗ್ ಅವರು ಇಲಾಖೆಗೆ ನೀಡಿದ ದೂರು ಅಥವಾ ಅರ್ಜಿಗಳ ಬಗ್ಗೆ.
ಕಾನೂನು ಪ್ರಕಾರ ಅಧಿಕಾರಿಗಳು ಆ ಅರ್ಜಿಗಳ ಪ್ರತಿ ನೀಡಬೇಕಿತ್ತು. ಆದರೆ, ಇತ್ತೀಚೆಗೆ ನನಗೆ ಬಂದ ಆ ಪತ್ರವನ್ನು ಓದಿದಾಗ ನನ್ನ ಕಣ್ಣುಗಳೇ ನನಗೆ ಮೋಸ ಮಾಡುತ್ತಿವೆಯೇ ಎಂಬ ಸಂಶಯ ಶುರುವಾಯಿತು. ಅಂಕೋಲಾ ಹೆಸ್ಕಾಂನ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಷ್ಟು ‘ಪುಣ್ಯಾತ್ಮರು’ ಎಂದರೆ, ನಾನು ಮಾಹಿತಿ ಕೇಳಿದ ಪುರುಷ ವಕೀಲರಾದ ವಿನೋದ್ ಶಾನ್ಭಾಗ್ ಅವರನ್ನು ತಮ್ಮ ಕವರಿಂಗ್ ಲೆಟರ್‌ನಲ್ಲಿ “ಶ್ರೀಮತಿ ವಿನೋದ ವಿಠ್ಠಲ ಶಾನ್ಭಾಗ್” ಎಂದು ಸಂಬೋಧಿಸಿಬಿಟ್ಟಿದ್ದಾರೆ! ಒಂದು ಕಡೆ ಪಾರದರ್ಶಕತೆಯ ಬಗ್ಗೆ ಮಾತಾಡುವ ಸರ್ಕಾರಿ ಯಂತ್ರ, ಮತ್ತೊಂದು ಕಡೆ ಒಬ್ಬ ಪುರುಷನನ್ನು ಕಡತಗಳಲ್ಲಿ ಮಹಿಳೆಯನ್ನಾಗಿ ಬದಲಿಸಿ ಮಾಹಿತಿ ನೀಡಲು ಹೊರಟಿದೆ.

ಇಷ್ಟಕ್ಕೇ ಈ ವಿಚಿತ್ರ ಕಥೆ ಮುಗಿಯುವುದಿಲ್ಲ. ಹೆಸ್ಕಾಂ ಅಧಿಕಾರಿಗಳ ಈ ‘ಕಳ್ಳಾಟ’ ಇಲ್ಲಿಂದ ಮುಂದಕ್ಕೆ ಇನ್ನಷ್ಟು ರೋಚಕವಾಗುತ್ತದೆ. ಇಲಾಖೆಯು ನೀಡಿರುವ ಆ ಕವರಿಂಗ್ ಲೆಟರ್‌ನಲ್ಲಿ ಹೆಸರೇನೋ “ಶ್ರೀಮತಿ ವಿನೋದ ವಿಠ್ಠಲ ಶಾನ್ಭಾಗ್” ಎಂದು ಬರೆಯಲಾಗಿದೆ. ಆದರೆ ತಮಾಷೆ ಏನೆಂದರೆ, ಆ ಪತ್ರಕ್ಕೆ ಅಧಿಕಾರಿಗಳು ಲಗತ್ತಿಸಿ ಕೊಟ್ಟಿರುವ ದಾಖಲೆ ಮಾತ್ರ ಶ್ರೀಮತಿ ವಿನಯ ವಿನೋದ ಶಾನ್ಭಾಗ್ ಅವರದ್ದು! ಅಂದರೆ ಕವರಿಂಗ್ ಲೆಟರ್‌ನಲ್ಲಿ ಒಬ್ಬರ ಹೆಸರು, ಒಳಗೆ ಲಗತ್ತಿಸಿದ ದಾಖಲೆಯಲ್ಲಿ ಇನ್ನೊಬ್ಬರ ಹೆಸರು! ಮಾಹಿತಿ ಕೇಳಿದ್ದು ಪುರುಷರಾದ ವಿನೋದ್ ಅವರ ಬಗ್ಗೆಯಾದರೆ, ಅಧಿಕಾರಿಗಳು ಉತ್ತರ ನೀಡಲು ಬಳಸಿಕೊಂಡ ಅಸ್ತ್ರ ಮಾತ್ರ ಅವರ ಪತ್ನಿಯಾದ ವಿನಯ ಅವರದ್ದು!
ಅಯ್ಯಾ ಅಧಿಕಾರಿಗಳೇ, ನಾನು ನಿಮ್ಮ ಮುಂದೆ ಅರ್ಜಿ ಹಿಡಿದು ಬಂದಿದ್ದು ‘ವಿನೋದ್‘ ಎಂಬ ಪುರುಷರ ಬಗ್ಗೆ, ನೀವು ನನಗೆ ‘ವಿನಯ’ ಎಂಬ ಮಹಿಳೆಯ ಆಕ್ಷೇಪಣೆಯ ಕಥೆ ಹೇಳುತ್ತಿದ್ದೀರಲ್ಲ, ಇದು ಯಾವ ನ್ಯಾಯ? ಮಾಹಿತಿ ಕೇಳಿದ್ದು ಅಕ್ಕಪಕ್ಕದ ಮನೆಯವರ ಬಗ್ಗೆಯಲ್ಲ, ಅಧಿಕೃತ ಕಡತಗಳ ಬಗ್ಗೆ. ಆದರೆ ಒಬ್ಬರ ಮಾಹಿತಿಯನ್ನು ಮರೆಮಾಚಲು ಅವರ ಪತ್ನಿಯ ಪತ್ರವನ್ನು ಗುರಾಣಿಯನ್ನಾಗಿ ಮಾಡಿಕೊಂಡ ನಿಮ್ಮ ಈ ಚಾಣಾಕ್ಷತನ ಈಗ ಸಾರ್ವಜನಿಕವಾಗಿ ಬಯಲಾಗಿದೆ.
ಒಟ್ಟಿನಲ್ಲಿ, ಈ ಇಡೀ ಪ್ರಹಸನವನ್ನು ಗಮನಿಸಿದರೆ ಅಧಿಕಾರಿಗಳು ಯಾರನ್ನೋ ಉಳಿಸಲು ಹರಸಾಹಸ ಪಡುತ್ತಿರುವುದು ಎದ್ದು ಕಾಣುತ್ತಿದೆ. ಒಂದು ಕಡೆ ಪುರುಷನನ್ನು ಮಹಿಳೆಯನ್ನಾಗಿ ಕಾಗದದಲ್ಲಿ ಬದಲಿಸುವ ಉಡಾಫೆ, ಇನ್ನೊಂದು ಕಡೆ ಒಬ್ಬರ ಹೆಸರಿನ ಪತ್ರಕ್ಕೆ ಮಗದೊಬ್ಬರ ದಾಖಲೆ ಲಗತ್ತಿಸಿ ಮಾಹಿತಿ ನಿರಾಕರಿಸುವ ಹುಂಬತನ. ಈ ಅಧಿಕಾರಿಗಳ ಕರಾಮತ್ತಿನಿಂದಾಗಿ ಈಗ ಹೆಸ್ಕಾಂ ಕಚೇರಿ “ಮಾಹಿತಿ ಕೇಂದ್ರ”ವಾಗುವ ಬದಲು “ಗೊಂದಲದ ಗೂಡು” ಆಗಿ ಮಾರ್ಪಟ್ಟಿದೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ನಾನು ಈಗಾಗಲೇ ಕಾರವಾರದ ಮೇಲಧಿಕಾರಿಗಳಿಗೆ ದೂರು ನೀಡಿದ್ದು, ಈ ‘ಲಿಂಗ ಬದಲಾವಣೆ’ಯ ಕರಾಮತ್ತು ಮತ್ತು ‘ಮಾಹಿತಿ ಮುಚ್ಚಿಡುವ’ ಕಳ್ಳಾಟಕ್ಕೆ ತಕ್ಕ ಶಾಸ್ತಿಯಾಗುವವರೆಗೂ ನನ್ನ ಈ ಕಾನೂನು ಹೋರಾಟ ನಿಲ್ಲದು.
ವರದಿ ಮತ್ತು ಅರ್ಜಿದಾರ:
ಕಿರಣ್ ಚಂದ್ರಹಾಸ ಗಾಂವಕರ✍️
ಕ್ರಾಂತಿಕಾರಿ ನ್ಯೂಸ್, ಅಂಕೋಲಾ.

Leave a Reply