ಅಂಕೋಲಾ ಪುರಸಭೆ “ಕಾನೂನು ಸಲಹೆಗಾರ ವಕೀಲರ ಕಟ್ಟಡ ವಿವಾದ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಬಿಗಿಯಾದ ಕಾನೂನು ಕುಣಿಕೆ; ಪುರಸಭೆಯ ಮುಂದಿನ ನಡೆ ಏನು?”

ಅಂಕೋಲಾ :​”ನಮಸ್ಕಾರ ವೀಕ್ಷಕರೆ..”​”ಬೇಲಿಯೇ ಎದ್ದು ಹೊಲ ಮೇಯ್ದರೆ ಗತಿಯೇನು? ಯಾರಿಗೆ ಜನಸಾಮಾನ್ಯರ ಹಿತ ಕಾಯುವ ಹೊಣೆಗಾರಿಕೆ ಇದೆಯೋ, ಅವರೇ ಅಧರ್ಮದ ಹಾದಿ ಹಿಡಿದರೆ ನ್ಯಾಯ ಕೇಳುವವರು ಯಾರು? ರಕ್ಷಕರೇ ಭಕ್ಷಕರಾದಾಗ, ಕಾನೂನು ಹೇಳಿಕೊಡುವವರೇ ಕಾನೂನಿಗೆ ಕೊಳ್ಳಿ ಇಟ್ಟಾಗ ವ್ಯವಸ್ಥೆ ಹೇಗೆ ಕುಸಿಯುತ್ತದೆ ಎಂಬುದಕ್ಕೆ ಅಂಕೋಲಾ ಪುರಸಭೆಯಲ್ಲಿ ನಡೆದ ಈ ಮಹಾ ಹಗರಣವೇ ಸಾಕ್ಷಿ!

“​”ಹೌದು ವೀಕ್ಷಕರೆ, ಒಂದು ಜಮೀನು.. ಒಂದೇ ಒಂದು ಈ-ಸ್ವತ್ತು.. ಆದರೆ ಪುರಸಭೆಯ ಅಧಿಕಾರಿಗಳು ಮಾಡಿದ ಜಾದೂ ಎಂಥದ್ದು ಎಂದರೆ, ಅದೇ ದಾಖಲೆಯ ಮೇಲೆ ಎರಡೆರಡು ಕಟ್ಟಡ ಪರವಾನಗಿಗಳನ್ನು ನೀಡಿ ಅಕ್ರಮಕ್ಕೆ ಕೆಂಪು ಹಾಸು ಹಾಸಿದ್ದಾರೆ! ಯಾರ ವಿರುದ್ಧ ಪುರಸಭೆಗೆ ನ್ಯಾಯಯುತ ಸಲಹೆ ನೀಡಬೇಕಿತ್ತೋ, ಅದೇ ಪುರಸಭೆಯ ‘ಕಾನೂನು ಸಲಹೆಗಾರ ವಕೀಲರ’ ಕುಟುಂಬವೇ ಈ ಅಕ್ರಮದ ಸೌಧ ಕಟ್ಟಲು ನಿಂತರೆ ಅಧಿಕಾರಿಗಳು ಮೂಕಪ್ರೇಕ್ಷಕರಾದರಾ? ಅಥವಾ ಈ ಅಕ್ರಮದ ಪಾಲಿನಲ್ಲಿ ಭಾಗಿಯಾದರಾ?”​”ಇಂದು ಅದೇ ಅಕ್ರಮದ ಅರಮನೆಗೆ ಹೈಕೋರ್ಟ್ ಮತ್ತು ಹೆಸ್ಕಾಂನಿಂದ ಮರ್ಮಾಘಾತ ಎದುರಾಗಿದೆ. ಲಕ್ಷಾಂತರ ರೂಪಾಯಿ ಸುರಿದು ಕಟ್ಟಿದ ಅರಮನೆಗೆ ಈಗ ಕರೆಂಟ್ ಇಲ್ಲದೆ, ಕಗ್ಗತ್ತಲೆಯಲ್ಲಿ ಸೋಲಾರ್ ಬೆಳಕೇ ಗತಿಯಾಗಿದೆ! ಅಷ್ಟಕ್ಕೂ ಅಂಕೋಲಾದಲ್ಲಿ ನಡೆದ ಆ ‘ನಕ್ಷೆಯ ಮಾಯಾಜಾಲ’ ಏನು? ಹೈಕೋರ್ಟ್ ನೀಡಿದ ಆ ಒಂದು ಆದೇಶ ಈಗ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದು ಹೇಗೆ? ಜಾಗೃತ ನಾಗರಿಕನೊಬ್ಬನ ಕಾನೂನು ಸಮರಕ್ಕೆ ಪ್ರಭಾವಿಗಳು ಬೆಚ್ಚಿಬಿದ್ದಿದ್ದೇಕೆ? ನೋಡಿ ಈ ವಿಶೇಷ ತನಿಖಾ ವರದಿ

*ಪುರಸಭೆಯಲ್ಲೇ ನಡೆದ ದಾಖಲೆಗಳ ಕಳ್ಳಾಟ* : ಅಕ್ರಮದ ಮೊದಲ ಇಟ್ಟಿಗೆ​ಈ ಮಹಾ ಹಗರಣದ ಮೊದಲ ಅಧ್ಯಾಯ ಆರಂಭವಾಗುವುದೇ ಪುರಸಭೆಯ ಕಚೇರಿಯಿಂದ. ನಿಯಮಗಳ ಪ್ರಕಾರ, 1973ರ ನಂತರ ಭೂ ಪರಿವರ್ತನೆಯಾದ ಯಾವುದೇ ೫ ಗುಂಟೆ ಜಮೀನಿಗೆ ಕಡ್ಡಾಯವಾಗಿ ‘ಏಕ ವಿನ್ಯಾಸ ನಕ್ಷೆ’ (Single Layout Plan) ಅನುಮೋದನೆ ಬೇಕಿತ್ತು. ಆದರೆ ಇಲ್ಲಿ ಪುರಸಭೆಯ ಅಧಿಕಾರಿಗಳು ಮಾಡಿದ್ದೇ ಬೇರೆ ಜಾದೂ! ಹಳೆಯ ಕಾಲದ, ಕೇವಲ ಹಾಳೆಯಲ್ಲಿ ಅರ್ಧ ಅಕ್ಷರವೇ ಉಳಿದುಕೊಂಡಿರುವ ‘ಸನ್ನದು ಪ್ರತಿ’ಯನ್ನೇ ಭೂ ಪರಿವರ್ತನೆಯ (NA) ಆದೇಶ ಎಂದು ತಪ್ಪಾಗಿ ಬಿಂಬಿಸಲಾಯಿತು. ಲೇಔಟ್ ನಕ್ಷೆಯೇ ಇಲ್ಲದಿದ್ದರೂ, ಮೂಲ ಮಾಲೀಕರ ಹೆಸರಿಗೆ ಪುರಸಭೆಯಲ್ಲಿ ಅಕ್ರಮವಾಗಿ ‘ಈ-ಸ್ವತ್ತು‘ ನಮೂನೆ -೩’ ದಾಖಲೆಗಳನ್ನು ಸೃಜಿಸಲಾಯಿತು. ಇದು ಕೇವಲ ತಾಂತ್ರಿಕ ಲೋಪವಲ್ಲ, ಅಧಿಕಾರಿಗಳು ಬೇಕೆಂದೇ ಮಾಡಿದ ವ್ಯವಸ್ಥಿತ ಎಂದು ಮೇಲ್ನೋಟಕ್ಕೆ ಟಕ್ಕೆ ಕಂಡು ಬರುತ್ತಿದೆ.​

*ರಕ್ಷಕನೇ ಭಕ್ಷಕ: ಕಾನೂನು ಸಲಹೆಗಾರರ ಕುಟುಂಬಕ್ಕೇ ಆಸ್ತಿ ವರ್ಗಾವಣೆ* ​ಯಾವಾಗ ಅಕ್ರಮ ದಾಖಲೆಗಳ ಮೂಲಕ ಪುರಸಭೆಯಲ್ಲಿ ಈ-ಸ್ವತ್ತು ಸಿದ್ಧವಾಯಿತೋ, ತಕ್ಷಣವೇ ಇದರ ಹಿಂದೆ ಯಾರಿದ್ದಾರೆ ಎಂಬುದು ಬಯಲಾಯಿತು. ಪುರಸಭೆಯ ಹಿತ ಕಾಯಬೇಕಾದ ಮತ್ತು ಅಕ್ರಮಗಳ ವಿರುದ್ಧ ಪುರಸಭೆಗೆ ಕಾನೂನು ಸಲಹೆ ನೀಡಬೇಕಾದ ಪುರಸಭೆಯ ಕಾನೂನು ಸಲಹೆಗಾರ ವಕೀಲರ ಪತ್ನಿ ಮತ್ತು ಆಕೆಯ ತಮ್ಮ (ಭಾವಮೈದ) ಈ ಜಾಗವನ್ನು ಜಂಟಿಯಾಗಿ ಖರೀದಿ ಮಾಡಿದರು.

ಅಂಕೋಲಾ ಉಪನೊಂದಣಿ ಕಚೇರಿಯಲ್ಲಿ ಖರೀದಿ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ಪುರಸಭೆಯಲ್ಲಿ ಅದೇ ಅಕ್ರಮ ದಾಖಲೆಗಳನ್ನು ಬಳಸಿ ಈ-ಸ್ವತ್ತನ್ನು ಜಂಟಿ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಲಾಯಿತು. ಪುರಸಭೆಯಲ್ಲೇ ಪ್ರಭಾವಿ ಸ್ಥಾನದಲ್ಲಿರುವವರು ಈ ಅಕ್ರಮದ ಪಾಲುದಾರರಾದಾಗ ವ್ಯವಸ್ಥೆ ಮೂಕಪ್ರೇಕ್ಷಕವಾಯಿತು.

​*ನಕ್ಷೆಯ ಮಾಯಾಜಾಲ ಮತ್ತು ಬೈಲಾ ನಿಯಮಗಳ ಘೋರ ಉಲ್ಲಂಘನೆ* *​ಕಟ್ಟಡ ಕಟ್ಟುವಾಗ ನಡೆದ ವಂಚನೆಯಂತೂ ಕಣ್ಣಿಗೆ ಮಣ್ಣೆರಚುವಂತದ್ದು. ಕರ್ನಾಟಕ ಪೌರಸಭೆಗಳ ಕಟ್ಟಡ ಬೈಲಾ (Building Bye-laws) ನಿಯಮಗಳ ಪ್ರಕಾರ, ಒಂದು ಆಸ್ತಿಯು ಜಂಟಿ ಖಾತೆಯಲ್ಲಿದ್ದಾಗ ಅದನ್ನು ಅಧಿಕೃತವಾಗಿ ಹಂಚಿಕೆ (Partition) ಮಾಡದೆ ಪ್ರತ್ಯೇಕ ಕಟ್ಟಡ ಪರವಾನಗಿ ನೀಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಆದರೆ ಅಂಕೋಲಾ ಪುರಸಭೆಯಲ್ಲಿ 2021ರ ಒಂದೇ ದಿನ ಎರಡು ಪ್ರತ್ಯೇಕ ಪರವಾನಗಿಗಳನ್ನು ಮಂಜೂರು ಮಾಡಿ ಅಚ್ಚರಿ ಮೂಡಿಸಲಾಯಿತು. ಈ ‘ನಕ್ಷೆ ವಂಚನೆ’ಯಲ್ಲಿ ಒಬ್ಬರ ಸೈಟನ್ನು ಮತ್ತೊಬ್ಬರ ‘ಖಾಲಿ ಜಾಗ’ (Setback) ಎಂದು ತೋರಿಸುವ ಎರಡು ಪ್ರತ್ಯೇಕ ನೀಲಿ ನಕ್ಷೆಗಳನ್ನು ಸಿದ್ಧಪಡಿಸಲಾಯಿತು.

ಅಷ್ಟಕ್ಕೇ ನಿಲ್ಲದೆ, ನಿಗದಿತ ಅವಧಿಯಲ್ಲಿ ಕಟ್ಟಡ ಕಾಮಗಾರಿ ಮುಗಿಯಲಿಲ್ಲ ಮತ್ತು ಆ ಪರವಾನಗಿ ನವೀಕರಣವೂ (Renewal) ಆಗಿಲ್ಲ. ಅತಿ ಮುಖ್ಯವಾಗಿ, ಕನ್ಸಲ್ಟೆಂಟ್ ಇಂಜಿನಿಯರ್ ಅವರು ನಕ್ಷೆ ಉಲ್ಲಂಘನೆಯನ್ನು ಅರಿತು ಈವರೆಗೂ ಕಟ್ಟಡ ಪೂರ್ಣಗೊಂಡ ವರದಿಯನ್ನು (CC – Completion Certificate) ಪುರಸಭೆಗೆ ನೀಡಿಲ್ಲ ಎಂದು ತಿಳಿದು ಬಂದಿದೆ.​

*ಹೆಸ್ಕಾಂ ಕಳ್ಳಾಟಕ್ಕೆ ಬ್ರೇಕ್: ಈಗ ಅಕ್ರಮದ ಅರಮನೆಗೆ ‘ಸೋಲಾರ್’ ಬೆಳಕೇ ಗತಿ!* ​ಈ ಅಕ್ರಮ ಕಟ್ಟಡಕ್ಕೆ ಹೆಸ್ಕಾಂ ಅಧಿಕಾರಿಗಳು ಶಾಮೀಲಾಗಿ ಸುಪ್ರೀಂ ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿ ಮೊದಲು ಶಾಶ್ವತ ವಿದ್ಯುತ್ ಸಂಪರ್ಕ ನೀಡಿದ್ದರು. ಆದರೆ ಜಾಗೃತ ನಾಗರಿಕನ ಸತತ ಕಾನೂನು ಹೋರಾಟದ ಮುಂದೆ ಭ್ರಷ್ಟರ ಆಟ ನಡೆಯಲಿಲ್ಲ. ಅಕ್ರಮವಾಗಿ ಪಡೆದಿದ್ದ ಶಾಶ್ವತ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳೆಲ್ಲವೂ ಈಗ ಕಡಿತಗೊಂಡಿವೆ. ಇದರ ಪರಿಣಾಮವಾಗಿ, ಲಕ್ಷಾಂತರ ರೂಪಾಯಿ ಸುರಿದು ಅಕ್ರಮವಾಗಿ ಕಟ್ಟಿದ ಆ ಬೃಹತ್ ಕಟ್ಟಡ ಇಂದು ಅಧಿಕೃತ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಮುಳುಗಿದೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ದಾರಿ ಕಾಣದ ಮಾಲೀಕರು, ಈಗ ಅನಿವಾರ್ಯವಾಗಿ ಕಟ್ಟಡದ ಮೇಲೆ ‘ಸೋಲಾರ್ ಪ್ಯಾನಲ್’ಗಳನ್ನು ಅಳವಡಿಸಿಕೊಂಡಿದ್ದಾರೆ. ಅಕ್ರಮದ ಹಾದಿ ತುಳಿದವರಿಗೆ ಈಗ ಸೂರ್ಯನ ಬೆಳಕೊಂದೇ ಸಾಕ್ಷಿಯಾಗಿದೆ!​

*ಹೈಕೋರ್ಟ್ ಸಮರ: ಯಾರ ವಿರುದ್ಧ ಯಾರ ದಾವೆ* ?​ತಮ್ಮ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿರುವುದನ್ನು ಕಂಡ ಕಟ್ಟಡದ ಮಾಲೀಕರು (ಕಾನೂನು ಸಲಹೆಗಾರರ ಕುಟುಂಬ), ಕಾನೂನಿನ ರಕ್ಷಣೆ ಪಡೆಯಲು ಮಾನ್ಯ ಹೈಕೋರ್ಟ್ ಮೆಟ್ಟಿಲೇರಿದರು. ಅಚ್ಚರಿಯೆಂದರೆ ಅರ್ಜಿದಾರರು ದಾವೆ ಹೂಡಿದ್ದು ಸ್ವತಃ ಅಂಕೋಲಾ ಪುರಸಭೆಯ ವಿರುದ್ಧವೇ! ಪುರಸಭೆಯ ಒಳಗಿದ್ದುಕೊಂಡೇ ಪುರಸಭೆಯ ಕಾನೂನು ಪ್ರಕ್ರಿಯೆಗಳಿಗೆ ತಡೆ ತರಲು ಯತ್ನಿಸಿದ್ದು ಅತಿ ದೊಡ್ಡ ವಿಪರ್ಯಾಸ. ಆದರೆ ಸತ್ಯದ ದಾಖಲೆಗಳ ಮುಂದೆ ಅರ್ಜಿದಾರರು ಅನಿವಾರ್ಯವಾಗಿ ತಮ್ಮ ವಾದದ ಪ್ರಮುಖ ಅಂಶಗಳನ್ನು ವಾಪಸ್ (Withdraw) ಪಡೆದರು.

ಹೈಕೋರ್ಟ್ ಈಗ ಪುರಸಭೆಗೆ “ಕಟ್ಟುನಿಟ್ಟಾಗಿ ಕಾನೂನಿನ ಚೌಕಟ್ಟಿನಲ್ಲಿದ್ದರೆ ಮಾತ್ರ ಪರಿಶೀಲಿಸಿ” ಎಂದು ಸ್ಪಷ್ಟ ಆದೇಶ ನೀಡಿದೆ.

​*

ಸೇಡಿನ ಕಿರುಕುಳ ಮತ್ತು ತನಿಖೆಯ ಪಾವಿತ್ರ್ಯತೆಗಾಗಿ ಆಗ್ರಹ* ​ಅಕ್ರಮ ಬಯಲಾದಾಗ ಕಂಗೆಟ್ಟ ಮಾಲೀಕರು ಮತ್ತು ವಕೀಲರು, ಈ ಜಾಗೃತ ನಾಗರಿಕನ ಮೇಲೆ ಸೇಡು ತೀರಿಸಿಕೊಳ್ಳಲು ದೂರುದಾರರು ಕೆಲಸ ಮಾಡುವ ಕಾರವಾರದ ಸಂಘದವರೆಗೂ ಲಗ್ಗೆ ಇಟ್ಟು ಮಾನಸಿಕ ಕಿರುಕುಳ ನೀಡಲು ಯತ್ನಿಸಿದರು. ಪುರಸಭೆಯ ಕಾನೂನು ಸಲಹೆಗಾರರ ಕುಟುಂಬವೇ ಈ ಅಕ್ರಮದಲ್ಲಿ ಭಾಗಿಯಾಗಿರುವ ಕಾರಣ, ಅವರು ಅದೇ ಸ್ಥಾನದಲ್ಲಿದ್ದರೆ ಸಾಕ್ಷ್ಯ ನಾಶಪಡಿಸುವ ಅಥವಾ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ, ಈ ವಿಚಾರಣೆ ನಡೆಯುವವರೆಗೆ ಸದರಿ ಕಾನೂನು ಸಲಹೆಗಾರರನ್ನು ಹುದ್ದೆಯಿಂದ ತಕ್ಷಣವೇ ಪದಚ್ಯುತಗೊಳಿಸಬೇಕು ಎಂಬ ಬಲವಾದ ಆಗ್ರಹ ಕೇಳಿಬಂದಿದೆ.

*ಕಾನೂನು ಎಲ್ಲರಿಗೂ ಒಂದೇ – ಅಧಿಕಾರಿಗಳೇ ಎಚ್ಚರ!* ​ಇಷ್ಟೆಲ್ಲಾ ಅಕ್ರಮಗಳಿದ್ದರೂ ಅಧಿಕಾರಿಗಳು ಮೌನವಾಗಿ ಓಸಿ ನೀಡಲು ಮುಂದಾದರೆ, ಅದು ನ್ಯಾಯಾಂಗಕ್ಕೆ ಮತ್ತು ಲೋಕಾಯುಕ್ತಕ್ಕೆ ಬಗೆಯುವ ದ್ರೋಹವಾಗುತ್ತದೆ. ಮಾನ್ಯ ಹೈಕೋರ್ಟ್ ಆದೇಶವು ಅಧಿಕಾರಿಗಳಿಗೆ ನೀಡಿರುವ ಪರಮೋಚ್ಚ ನಿರ್ದೇಶನವೇ ಹೊರತು ಅಕ್ರಮಕ್ಕೆ ನೀಡಿರುವ ರಕ್ಷಣೆಯಲ್ಲ. ಕಾನೂನು ಎಲ್ಲರಿಗೂ ಒಂದೇ! ಪ್ರಭಾವಿಗಳ ಒತ್ತಡಕ್ಕೋ ಅಥವಾ ಲಾಭಕ್ಕೋ ಮಣಿಯದೆ, ಅಧಿಕಾರಿಗಳು ಸಂವಿಧಾನ ಮತ್ತು ಕಾನೂನಿಗೆ ಮಾತ್ರ ತಲೆಬಾಗಬೇಕು.

ಅಕ್ರಮ ಕಟ್ಟಡಗಳಿಗೆ ಮಾನ್ಯತೆ ನೀಡುವ ಬದಲು ಸತ್ಯದ ಪರವಾಗಿ ನಿಂತು ನ್ಯಾಯವನ್ನು ಎತ್ತಿ ಹಿಡಿಯುವ ಜವಾಬ್ದಾರಿ ಇಂದು ಅಧಿಕಾರಿಗಳ ಮೇಲಿದೆ. ಅಧರ್ಮದ ಹಾದಿಯಲ್ಲಿ ಕಟ್ಟಿದ ಸೌಧ ಅಂತಿಮವಾಗಿ ಸತ್ಯದ ಮುಂದೆ ತಲೆಬಾಗಲೇಬೇಕು. ​

ಸತ್ಯಮೇವ ಜಯತೆ..

ವರದಿ :ಕಿರಣ ಗಾಂವಕರ

Leave a Reply

Your email address will not be published. Required fields are marked *