ಅಂಕೋಲಾ: ತಾಲೂಕಿನ ಪಟ್ಟಣ ಪ್ರದೇಶಕ್ಕೆ ಒಳಪಡುವ ಶೇಡಗೇರಿ ಗ್ರಾಮದ ಸರ್ವೆ ನಂಬರ್ 4ಅ 1 ಅ 1 ರ ವ್ಯಾಪ್ತಿಯಲ್ಲಿರುವ ಸುಮಾರು 1 ಎಕರೆ 3 ಗುಂಟೆ ವಿಸ್ತೀರ್ಣದ ಸರ್ಕಾರಿ ನೇದರ ಕ್ಷೇತ್ರವು ಈಗ ಕಾನೂನಾತ್ಮಕ ಹೋರಾಟದ ಕೇಂದ್ರಬಿಂದುವಾಗಿದೆ.

ಈ ಸರ್ಕಾರಿ ಜಾಗದಲ್ಲಿ ಅವ್ಯಾಹತವಾಗಿ ಅಕ್ರಮ ನಿರ್ಮಾಣಗಳು ನಡೆಯುತ್ತಿವೆ ಮತ್ತು ಇದನ್ನು ತಡೆಯುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಚೇತನ ನಾಯಕ್ ಅವರು ಕಾನೂನುಬದ್ಧವಾಗಿ ದೂರು ದಾಖಲಿಸಿದ್ದರು. ಈ ದೂರಿನ ಗಂಭೀರತೆಯನ್ನು ಪರಿಗಣಿಸಿದ ತಾಲೂಕು ಆಡಳಿತವು ನಿನ್ನೆ ದಿನಾಂಕ 23/03/2026 ರಂದು ಸರ್ಕಾರಿ ಆಸ್ಪತ್ರೆಯ ಸಮೀಪವಿರುವ ಸದರಿ ಜಾಗದ ಗಡಿ ಗುರುತಿಸುವಿಕೆ ಮತ್ತು ಸರ್ವೆ ಕಾರ್ಯವನ್ನು ಹಮ್ಮಿಕೊಂಡಿತ್ತು.ಈ ಸರ್ವೆ ಪ್ರಕ್ರಿಯೆಯು ತಾಲೂಕು ಭೂಮಾಪಕ ಪ್ರಶಾಂತ ಶೇಟ್ ಅವರ ನೇತೃತ್ವದಲ್ಲಿ ನಡೆದಿದ್ದು, ಗ್ರಾಮ ಲೆಕ್ಕಾಧಿಕಾರಿ ಹೇಮಂತ್ ಕುಮಾರ್, ಬಾಂಧ ಜವಾನ ಪ್ರವೀಣ ನಾಯ್ಕ ಹಾಗೂ ಗ್ರಾಮ ಸಹಾಯಕರು ಸ್ಥಳದಲ್ಲಿದ್ದರು
. ಅರ್ಜಿದಾರರಾದ ಚೇತನ ನಾಯಕ್ ಅವರ ಸಮ್ಮುಖದಲ್ಲೇ ನಡೆದ ಈ ಅಳತೆ ಕಾರ್ಯದ ನಂತರ ಸರ್ವೆ ಇಲಾಖೆಯು ಅಧಿಕೃತ ವರದಿಯನ್ನು ಸಿದ್ಧಪಡಿಸಿದ್ದು, ಸದರಿ 1 ಎಕರೆ 3 ಗುಂಟೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿರುವುದು ಅಧಿಕೃತವಾಗಿ ರುಜುವಾತಾಗಿದೆ.
ಈ ಇಡೀ ವಿವಾದದ ನಡುವೆ ಒಂದು ಅತ್ಯಂತ ನೋವಿನ ಮತ್ತು ಭಾವನಾತ್ಮಕ ಕಥೆಯೂ ಅಡಗಿದೆ. ಈ ಸರ್ಕಾರಿ ಜಮೀನಿನಲ್ಲಿ ಈಗಾಗಲೇ ಅನೇಕ ಬೃಹತ್ ಕಟ್ಟಡಗಳು ಅಕ್ರಮವಾಗಿ ನಿರ್ಮಾಣವಾಗಿವೆ. ಆದರೆ, ಇವೆಲ್ಲವುಗಳ ನಡುವೆ ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಒಬ್ಬ ಪೌರಕಾರ್ಮಿಕರ ಕುಟುಂಬಕ್ಕೆ ಸೇರಿದ ಯುವತಿಯ ಅಸಹಾಯಕತೆ ಎದ್ದು ಕಾಣುತ್ತಿದೆ.
ತನ್ನ ತಂದೆಯ ನೆನಪಿನ ಅಸ್ತಿತ್ವವಾಗಿದ್ದ ಬಡ ಕುಟುಂಬದ ಆ ಹಳೆಯ ಮನೆ ಸರಿಯಾದ ನಿರ್ವಹಣೆ ಇಲ್ಲದೆ ಬಿದ್ದು ಹೋಗಿತ್ತು. ಊರೆಲ್ಲಾ ಸರ್ಕಾರಿ ಜಾಗ ನುಂಗುತ್ತಿರುವಾಗ, ತನ್ನ ತಂದೆಯ ಕುರುಹನ್ನಾದರೂ ಉಳಿಸಿಕೊಳ್ಳಬೇಕೆಂಬ ನೋವಿನ ಹಂಬಲದಿಂದ ಆಕೆ ಬಿದ್ದು ಹೋದ ಮನೆಯನ್ನು ಮರುನಿರ್ಮಿಸಲು ಪಂಚಾಂಗ ಹಾಕಿದ್ದಾಳೆ.ಆದರೆ, ಕಹಿಸತ್ಯವೆಂದರೆ ಈ ಯುವತಿಯ ಪಂಚಾಂಗ ಹಾಕುವ ಮುನ್ನವೇ ಅಲ್ಲಿ ಇಡೀ 1 ಎಕರೆ ಗಿಂತಲೂ ಹೆಚ್ಚು ಜಾಗವು ಅಕ್ರಮವಾಗಿ ಹಂಚಿಹೋಗಿತ್ತು.
ಈಗ ಪಹಣಿ ಪತ್ರಿಕೆಯಲ್ಲಿ ದಾಖಲೆಯಿದ್ದರೂ ವಾಸ್ತವದಲ್ಲಿ ನಿಲ್ಲಲು ಒಂದು ಗುಂಟೆ ಜಾಗವೂ ಖಾಲಿ ಉಳಿದಿಲ್ಲ ಎಂಬುದು ಚೇತನ ನಾಯಕ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. “ಇಲ್ಲಿ ಯಾವುದೇ ನೆರೆಹಾವಳಿ ಸಂಭವಿಸದಿದ್ದರೂ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಧಿಕಾರಿಗಳೇ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಬಡವರ ಭಾವನೆಗಳಿಗಿಂತ ಇಲ್ಲಿ ಅಕ್ರಮದ ಹಾವಳಿ ಹೆಚ್ಚಾಗಿದೆ,” ಎಂದು ಅವರು ಟೀಕಿಸಿದ್ದಾರೆ.ಸರ್ವೆ ವರದಿಯಲ್ಲಿ ಒಟ್ಟಾರೆ ಅಕ್ರಮ ರುಜುವಾತಾಗಿರುವುದರಿಂದ, ತಾಲೂಕು ಆಡಳಿತವು ಕೇವಲ ಬಡವರ ಮನೆಯನ್ನಷ್ಟೇ ಅಲ್ಲದೆ, ಪ್ರಭಾವಿಗಳು ಈ ಮೊದಲೇ ನಿರ್ಮಿಸಿರುವ ಎಲ್ಲಾ ಅಕ್ರಮ ಕಟ್ಟಡಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಈ 1-03-00 ಜಾಗದ ಭವಿಷ್ಯ ಈಗ ಆಡಳಿತದ ಕಾನೂನು ಕ್ರಮದ ಕೈಯಲ್ಲಿದೆ.
ವರದಿ :ಕಿರಣ ಗಾಂವಕರ ✍️













Leave a Reply