ಮಧ್ಯರಾತ್ರಿ ನಡೆದ ಘಟನೆ: ರಸ್ತೆ ಬದಿಯಲ್ಲಿ ನರಳುತ್ತಿದ್ದ ನರಿಯನ್ನು ರಕ್ಷಿಸಿದ ಫಾರೆಸ್ಟ್ ಗಾರ್ಡ್.
ಕಾರವಾರ: ದಿನಾಂಕ 13-03-2026ರ ರಾತ್ರಿ 11:30ರ ಸಮಯ. ನಂದನಗದ್ದಾ ದಿಂದ ಬಂಡಿಸಿಟ್ಟ ಕಡೆಗೆ ಹೋಗುವ ರಸ್ತೆಯ ಪೇಡನೇಕರ್ ವಾಡ್ ಬಳಿ ಅಪಘಾತಕ್ಕೀಡಾದ ವನ್ಯಜೀವಿ ನರಿಯೊಂದು ರಸ್ತೆಯ ಬದಿಯಲ್ಲಿ ಗಾಯಗೊಂಡು ಬಿದ್ದಿತ್ತು. ಆ ರಸ್ತೆಯ ಮೂಲಕ ಸಾಗುತ್ತಿದ್ದ ನವೀನ ಗಾಂವಕರ್ ಅವರು ರಕ್ತದ ಮಡುವಿನಲ್ಲಿ ನರಳುತ್ತಿದ್ದ ಪ್ರಾಣಿಯನ್ನು ಗಮನಿಸಿ, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ಕಾರವಾರ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಬೀಟ್ ಫಾರೆಸ್ಟರ್ ಗೋಪಾಲ್ ನಾಯ್ಕ್, ಕರ್ತವ್ಯದ ಭಾಗವಾಗಿ ತಡಮಾಡದೆ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದರು.ಸ್ಥಳಕ್ಕೆ ಬಂದು ನೋಡಿದಾಗ ನರಿಯ ಸ್ಥಿತಿ ಗಂಭೀರವಾಗಿತ್ತು. ಪ್ರಾಣಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಚಿಕಿತ್ಸೆ ಅಗತ್ಯವಿತ್ತು. ದೊಡ್ಡ ವಾಹನಕ್ಕಾಗಿ ಕಾಯುವ ಬದಲಿಗೆ, ಮೂಲತಃ ಶಿವಮೊಗ್ಗದವರಾದ ಗೋಪಾಲ್ ನಾಯ್ಕ್ ಅವರು ತಾವೊಬ್ಬರೇ ನರಿಯನ್ನು ಎತ್ತಿಕೊಂಡು ತಮ್ಮ ಬೈಕ್ನಲ್ಲಿ ಹತ್ತಿಸಿಕೊಂಡರು.

ಆ ಮಧ್ಯರಾತ್ರಿಯ ಕತ್ತಲಲ್ಲಿ ಒಬ್ಬರೇ ಬೈಕ್ ಚಲಾಯಿಸಿಕೊಂಡು ಹೋಗಿ, ನರಿಗೆ ತಕ್ಷಣದ ಪ್ರಥಮ ಚಿಕಿತ್ಸೆ ದೊರಕುವಂತೆ ಮಾಡಿದರು.ಯಾವುದೇ ವಿಳಂಬ ಮಾಡದೆ, ಕರ್ತವ್ಯದ ಕರೆಯನ್ನು ಪಾಲಿಸಿದ ಗೋಪಾಲ್ ನಾಯ್ಕ್ ಅವರ ಈ ನಡೆ, ಅಂದು ಆ ವನ್ಯಜೀವಿಯ ಪ್ರಾಣ ಉಳಿಸಲು ಕಾರಣವಾಯಿತು. ಸಾರ್ವಜನಿಕರು ನೀಡಿದ ಮಾಹಿತಿಗೆ ಇಲಾಖೆಯ ಸಿಬ್ಬಂದಿ ತ್ವರಿತವಾಗಿ ಸ್ಪಂದಿಸಿದ ಈ ಘಟನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.













Leave a Reply