ಪೌತಿ ಖಾತೆಗೆ ‘ಆಧಾರ್ ಒಟಿಪಿ’ ಎಂಬ ತಾಂತ್ರಿಕ ಮೃತ್ಯುಶಾಸನ! ಜನಸಾಮಾನ್ಯರು ಹೈರಾಣು.
ಅಂಕೋಲಾ :apr14.2026. ರಾಜ್ಯದ ಕಂದಾಯ ಇಲಾಖೆಯು ಪೌತಿ ಖಾತೆ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿ ಹೇಳಿ ಜಾರಿಗೆ ತಂದ ‘ಇ-ಪೌತಿ’ ವ್ಯವಸ್ಥೆಯು ಇಂದು ಜನಸಾಮಾನ್ಯರ ಪಾಲಿಗೆ ವರವಾಗಿ ಪರಿಣಮಿಸುವ ಬದಲು ಅತಿದೊಡ್ಡ ಶಾಪವಾಗಿ ಮಾರ್ಪಟ್ಟಿದೆ. ತಂತ್ರಜ್ಞಾನದ ಅಬ್ಬರದಲ್ಲಿ ಬಡ ರೈತರು ಮತ್ತು ಸಾಮಾನ್ಯ ಜನರ ಆಸ್ತಿ ಹಕ್ಕನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ ಎಂಬ ಕಟು ಸತ್ಯ ಈಗ ಬಯಲಾಗುತ್ತಿದೆ. ಪೌತಿ ಖಾತೆ ಮಾಡಲು ಪ್ರತಿಯೊಬ್ಬ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ನೀಡಿ, ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಕಡ್ಡಾಯವಾಗಿ ನಮೂದಿಸಬೇಕೆಂಬ ನಿಯಮವು ರಾಜ್ಯಾದ್ಯಂತ ಒಂದು ರೀತಿಯ ‘ತಾಂತ್ರಿಕ ತುರ್ತುಪರಿಸ್ಥಿತಿ’ಯನ್ನು ಸೃಷ್ಟಿಸಿದೆ.
ಈ ಹಿಂದೆ ಕೇವಲ ದಾಖಲೆಗಳ ಪ್ರತಿಗಳನ್ನು ನೀಡಿ ಸುಲಭವಾಗಿ ಆಗುತ್ತಿದ್ದ ಕೆಲಸವು, ಇಂದು ಡಿಜಿಟಲ್ ಪರದೆಯ ಮುಂದೆ ಅಸಹಾಯಕವಾಗಿ ನಿಲ್ಲುವಂತೆ ಮಾಡಿದೆ. ಒಂದು ಕುಟುಂಬದಲ್ಲಿ ನಾಲ್ಕೈದು ಜನ ಸದಸ್ಯರಿದ್ದು, ಎಲ್ಲರೂ ಒಮ್ಮತದಿಂದ ಆಸ್ತಿ ಹಂಚಿಕೊಳ್ಳಲು ಸಿದ್ಧರಿದ್ದರೂ ಸಹ, ಕೇವಲ ಒಬ್ಬ ಸದಸ್ಯನ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿಲ್ಲ ಎಂಬ ಕಾರಣಕ್ಕೆ ಇಡೀ ಕುಟುಂಬದ ಆಸ್ತಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿರುವುದು ಎಷ್ಟು ನ್ಯಾಯಯುತ ಎಂಬ ಪ್ರಶ್ನೆ ಮೂಡುತ್ತಿದೆ.

ಇಲ್ಲಿ ಅತಿದೊಡ್ಡ ವಿಪರ್ಯಾಸವೆಂದರೆ, ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಹೊಸ ಸುತ್ತೋಲೆಯಲ್ಲಿ ಮರಣ ಪ್ರಮಾಣಪತ್ರ ಇಲ್ಲದಿದ್ದರೆ ಏನು ಮಾಡಬೇಕು ಅಥವಾ ವಂಶವೃಕ್ಷ ಇಲ್ಲದಿದ್ದರೆ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಪರ್ಯಾಯ ಮಾರ್ಗಗಳನ್ನು ನೀಡಿದೆ.
ಆದರೆ, ಇಡೀ ಪ್ರಕ್ರಿಯೆಗೆ ಅಡ್ಡಗಾಲಾಗಿ ನಿಂತಿರುವ ‘ಆಧಾರ್ ಕಾರ್ಡ್ ಇಲ್ಲದಿದ್ದರೆ ಅಥವಾ ಒಟಿಪಿ ಬರದಿದ್ದರೆ ಏನು ಮಾಡಬೇಕು?’ ಎಂಬ ಅತ್ಯಂತ ಪ್ರಮುಖ ಪ್ರಶ್ನೆಗೆ ಯಾವುದೇ ಮಾರ್ಗಸೂಚಿಯನ್ನು ನೀಡಿಲ್ಲ. ಅಂದರೆ, ಆಧಾರ್ ಕಾರ್ಡ್ ಇಲ್ಲದ ಅಥವಾ ತಾಂತ್ರಿಕ ಕಾರಣಗಳಿಂದ ಒಟಿಪಿ ಪಡೆಯಲಾಗದ ವಾರಸುದಾರರು ತಮ್ಮ ಆಸ್ತಿ ಹಕ್ಕನ್ನೇ ಬಿಟ್ಟುಕೊಡಬೇಕೆ ಎಂಬ ಅಸಹಾಯಕತೆ ಎದುರಾಗಿದೆ.
ಕುಟುಂಬದ ಹಿರಿಯ ನಾಗರಿಕರ ಹೆಸರಲ್ಲಿ ಆಧಾರ್ ಕಾರ್ಡ್‌ಗಳಿದ್ದರೂ ಅವುಗಳಿಗೆ ಹತ್ತು ವರ್ಷಗಳ ಹಿಂದೆ ಯಾವುದೋ ನಂಬರ್ ಲಿಂಕ್ ಆಗಿರುತ್ತದೆ ಅಥವಾ ಅನೇಕರಿಗೆ ಮೊಬೈಲ್ ಸಂಖ್ಯೆಯೇ ಲಿಂಕ್ ಆಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಆ ವೃದ್ಧರನ್ನು ಆಧಾರ್ ಕೇಂದ್ರಗಳಿಗೆ ಹೊತ್ತು ತಂದು, ಬೆರಳಚ್ಚು ನೀಡಿ, ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಿಸಿ, ಅದು ಸಕ್ರಿಯವಾಗುವವರೆಗೆ ಕಾಯುವುದು ಪ್ರಾಯೋಗಿಕವಾಗಿ ಅಸಾಧ್ಯದ ಮಾತು.
ಇನ್ನು ವಿದೇಶಗಳಲ್ಲಿ ನೆಲೆಸಿರುವ ಸದಸ್ಯರು ಪಾಸ್‌ಪೋರ್ಟ್‌ನಂತಹ ಶಕ್ತಿಶಾಲಿ ದಾಖಲೆ ಹೊಂದಿದ್ದರೂ, ಸಿಸ್ಟಮ್ ಅವುಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದೆ.
ಈ ಹಿಂದೆ ಜಾರಿಯಲ್ಲಿದ್ದ ಪದ್ಧತಿಯೇ ಅತ್ಯಂತ ಜನಸ್ನೇಹಿ ಮತ್ತು ತಾರ್ಕಿಕವಾಗಿತ್ತು. ಆಗ ಯಾವುದೇ ಓಟಿಪಿ ಕಿರಿಕಿರಿ ಇರಲಿಲ್ಲ. ವಾರಸುದಾರರು ಗ್ರಾಮ ಲೆಕ್ಕಾಧಿಕಾರಿಗಳಿಗೆ ಭೌತಿಕವಾಗಿ ದಾಖಲೆಗಳನ್ನು ಸಲ್ಲಿಸುತ್ತಿದ್ದರು. ಅಧಿಕಾರಿಗಳು ಸ್ಥಳೀಯವಾಗಿ ವಿಚಾರಣೆ ನಡೆಸಿ, ಗ್ರಾಮಸ್ಥರ ಸಮ್ಮುಖದಲ್ಲಿ ಮಹಜರು ಮಾಡಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಖಾತೆ ಬದಲಾವಣೆ ಮಾಡುತ್ತಿದ್ದರು. ಮೃತ ವ್ಯಕ್ತಿಯ ಕುಟುಂಬದ ಡಿಜಿಟಲ್ ವಂಶಾವಳಿಯ ಆಧಾರದ ಮೇಲೆ ಮತ್ತು ಮೃತ ವ್ಯಕ್ತಿಗೆ ಹಕ್ಕು ಬಂದ ಎಂಟ್ರಿ ಯನ್ನು ಪಡೆದುಕೊಂಡ ದಾಖಲೆಯನ್ನು ಪಡೆದುಕೊಂಡು ಪೌತಿ ಖಾತೆ ಆಗುತ್ತಿತ್ತು .
ಈಗಿನ ಡಿಜಿಟಲ್ ವ್ಯವಸ್ಥೆಯಲ್ಲಿ ರಕ್ತಸಂಬಂಧಕ್ಕಿಂತ ‘ಒಟಿಪಿ’ ದೊಡ್ಡದಾಗಿಬಿಟ್ಟಿದೆ. ಮೃತ ವ್ಯಕ್ತಿಯ ನಿಜವಾದ ಮಕ್ಕಳೇ ಎದುರು ನಿಂತಿದ್ದರೂ, ಒಟಿಪಿ ಬರದಿದ್ದರೆ ಅವರು ವಾರಸುದಾರರಲ್ಲ ಎಂಬಂತೆ ಸಿಸ್ಟಮ್ ವರ್ತಿಸುತ್ತಿದೆ. ಭಾರತ ಸರ್ಕಾರ ನೀಡಿರುವ ಮತದಾರರ ಗುರುತಿನ ಚೀಟಿ ಅಥವಾ ಪಡಿತರ ಚೀಟಿಗಳಿಗೆ ಈ ಸಾಫ್ಟ್‌ವೇರ್‌ನಲ್ಲಿ ಕಿಂಚಿತ್ತೂ ಬೆಲೆ ಇಲ್ಲದಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅಪಮಾನಕಾರಿಯಾಗಿದೆ.
ಒಬ್ಬ ವ್ಯಕ್ತಿಯ ಅಸ್ತಿತ್ವವನ್ನು ಸಾಬೀತುಪಡಿಸಲು ಆಧಾರ್ ಒಂದೇ ಮಾನದಂಡವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ಕಂದಾಯ ಇಲಾಖೆಯ ಈ ಹಠಮಾರಿ ಧೋರಣೆ ಸಂವಿಧಾನದತ್ತವಾದ ಆಸ್ತಿ ಹಕ್ಕಿನ ಉಲ್ಲಂಘನೆಯಾಗಿದೆ.ಈ ತಾಂತ್ರಿಕ ಅಡೆತಡೆಯಿಂದಾಗಿ ಹಳ್ಳಿಗಳಲ್ಲಿ ರೈತರು ತೀರಿಕೊಂಡ ನಂತರ ಅವರ ಮಕ್ಕಳ ಹೆಸರಿಗೆ ಪಹಣಿ ಬದಲಾಗದೆ, ಕೃಷಿ ಸಾಲ ಸಿಗದೆ, ಬೆಳೆ ವಿಮೆ ಬಾರದೆ ಮತ್ತು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸತ್ತವರ ಹೆಸರಿನಲ್ಲೇ ಪಹಣಿಗಳು ಮುಂದುವರಿಯುತ್ತಿರುವುದರಿಂದ ಆಸ್ತಿ ವಿವಾದಗಳು ಹೆಚ್ಚಾಗುತ್ತಿವೆ.
ಒಟಿಪಿ ಬಾರದಿದ್ದಲ್ಲಿ ಪರ್ಯಾಯವಾಗಿ ಬಯೋಮೆಟ್ರಿಕ್ ಅಥವಾ ಅಧಿಕಾರಿಗಳ ಭೌತಿಕ ದೃಢೀಕರಣಕ್ಕೆ ಅವಕಾಶ ನೀಡದಿರುವುದು ವ್ಯವಸ್ಥೆಯ ಜಡತ್ವವನ್ನು ತೋರಿಸುತ್ತದೆ. ಆಧಾರ್ ಇಲ್ಲದವರು ಅಥವಾ ಆಧಾರ್ ಅಪ್‌ಡೇಟ್ ಇಲ್ಲದವರು ಈ ದೇಶದ ಪ್ರಜೆಗಳಲ್ಲವೇ? ಅವರಿಗೆ ತಮ್ಮ ತಂದೆ-ತಾಯಿಯ ಆಸ್ತಿಯನ್ನು ಪಡೆಯುವ ಹಕ್ಕಿಲ್ಲವೇ? ರಾಜ್ಯ ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು ಈ ‘ಒಟಿಪಿ ಕಡ್ಡಾಯ’ ನಿಯಮವನ್ನು ಸಡಿಲಗೊಳಿಸಬೇಕು. ಹಳೆಯ ಪದ್ಧತಿಯಂತೆ ಭೌತಿಕ ದಾಖಲೆಗಳ ಪರಿಶೀಲನೆಗೂ ಅವಕಾಶ ನೀಡಿ, ವಾರಸುದಾರರ ಹಕ್ಕನ್ನು ರಕ್ಷಿಸಬೇಕಿದೆ. ಇಲ್ಲದಿದ್ದರೆ ತಾಂತ್ರಿಕತೆ ಎಂಬ ಹೆಸರಿನಲ್ಲಿ ಜನರ ಆಸ್ತಿಯನ್ನು ಕಸಿಯುವ ಈ ವ್ಯವಸ್ಥೆಯ ವಿರುದ್ಧ ರಾಜ್ಯಾದ್ಯಂತ ಜನವೈರಿ ಹೋರಾಟ ಸಂಘಟಿತವಾಗುವುದರಲ್ಲಿ ಅನುಮಾನವಿಲ್ಲ.
ವರದಿ: ಕಿರಣ್ ಗಾಂವಕರ.✍️













Leave a Reply