ಶ್ರೀ ಗಜಾನನ ಟ್ಯಾಕ್ಸಿ ಚಾಲಕರ-ಮಾಲಕರ ಸಂಘದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಟ್ಯಾಕ್ಸಿ ಚಾಲಕರು ತಪ್ಪದೇ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಿ: ಗೋಪಾಲಕೃಷ್ಣ ನಾಯಕ.
ಅಂಕೋಲಾ: ಶ್ರೀ ಗಜಾನನ ಟ್ಯಾಕ್ಸಿ ಚಾಲಕರ ಹಾಗೂ ಮಾಲಕರ ಸಂಘ (ರಿ.) ಅಂಕೋಲಾ ಆಯೋಜಿಸಿರುವ ವಾರ್ಷಿಕ ಕ್ರಿಕೆಟ್ ಪಂದ್ಯಾವಳಿಯು ದಿನಾಂಕ 10-03-2026 ರಂದು ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಕ್ರೀಡಾಸ್ಪೂರ್ತಿ ಹಾಗೂ ಸಮಾಜಸೇವೆಯ ಸಂಗಮದೊಂದಿಗೆ ಆರಂಭಗೊಂಡಿತು. ದಿವಂಗತ ಆರ್. ಎನ್. ನಾಯಕ ವೇದಿಕೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸಂಘದ ಸರ್ವ ಸದಸ್ಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸಮಾರಂಭದ ಪ್ರಾರಂಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ರಮಾಕಾಂತ (ಗಜು) ಎಮ್. ನಾಯ್ಕ್ ಅವರು, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಸಮಸ್ತರಿಗೂ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಟ್ಯಾಕ್ಸಿ ಚಾಲಕರು ಎದುರಿಸುತ್ತಿರುವ ವಿವಿಧ ವೃತ್ತಿಪರ ಸಮಸ್ಯೆಗಳು ಹಾಗೂ ಪಾರ್ಕಿಂಗ್ ಸ್ಥಳಾವಕಾಶದ ಅಗತ್ಯತೆಯ ಕುರಿತು ಪ್ರಮುಖ ವಿಷಯಗಳನ್ನು ವೇದಿಕೆಯ ಮುಂದಿಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರು ಮಾತನಾಡಿ, ಟ್ಯಾಕ್ಸಿ ಚಾಲಕರು ಹಾಗೂ ಮಾಲಕರು ಸರ್ಕಾರದ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ವಿವಿಧ ಕಲ್ಯಾಣ ಯೋಜನೆಗಳ ಸಂಪೂರ್ಣ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಅಲ್ಲದೆ, ಟ್ಯಾಕ್ಸಿ ಪಾರ್ಕಿಂಗ್‌ನಂತಹ ಬಹುದಿನದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ನಂತರ ಮಾತನಾಡಿದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಅವರು, ಗೋಪಾಲಕೃಷ್ಣ ನಾಯಕರ ವ್ಯಕ್ತಿತ್ವವನ್ನು ಶ್ಲಾಘಿಸುತ್ತಾ, ಅವರು ನುಡಿದಂತೆ ನಡೆಯುವ ವ್ಯಕ್ತಿಯಾಗಿದ್ದು ಸಮಾಜಸೇವೆಯ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಬಳಿಕ ವರದಿಗಾರ ಕಿರಣ ಚಂದ್ರಹಾಸ ಗಾಂವಕರ್ ಅವರು, ಗಜು ನಾಯ್ಕ್ ಅವರ ದಕ್ಷ ನೇತೃತ್ವದಲ್ಲಿ ಟ್ಯಾಕ್ಸಿ ಸಂಘವು ರಕ್ತದಾನ ಶಿಬಿರಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಅರ್ಥಪೂರ್ಣ ಆಚರಣೆಯ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷ ನಾಗಾನಂದ ಟಿ. ಬಂಟ ಅವರು, ತಾವು ಸಂಘದ ಕಾನೂನು ಸಲಹೆಗಾರರಾಗಿರುವುದನ್ನು ಹೆಮ್ಮೆಯಿಂದ ಸ್ಮರಿಸಿ, ಕಳೆದ ಕೆಲವು ವರ್ಷಗಳಿಂದ ಶ್ರೀ ಗಜಾನನ ಟ್ಯಾಕ್ಸಿ ಸಂಘವು ಜಿಲ್ಲೆಯಲ್ಲೇ ಮಾದರಿ ಸಂಘಟನೆಯಾಗಿ ಬೆಳೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘಟನೆಯ ಒಗ್ಗಟ್ಟೇ ಅದರ ನಿಜವಾದ ಶಕ್ತಿ ಎಂದು ಹೇಳಿದರು.

ಸಮಾರಂಭದ ಸಂಪೂರ್ಣ ನಿರೂಪಣೆಯನ್ನು ಸಂಘದ ಉಪಾಧ್ಯಕ್ಷರಾದ ಅಕ್ಷಯ್ ಅಂಕೋಲೇಕರ್ ಅವರು ಅಚ್ಚುಕಟ್ಟಾಗಿ ನೆರವೇರಿಸಿದರು.













Leave a Reply