ಅಂಕೋಲದಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಬ್ಯಾನರ್ ಸಂಸ್ಕೃತಿ!
ಅಂಕೋಲಾ: ಒಂದು ನಾಗರಿಕ ಸಮಾಜದಲ್ಲಿ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳಲ್ಲ; ಅಲ್ಲಿನ ಜನರ ಪ್ರಾಣಕ್ಕೆ ನೀಡುವ ಬೆಲೆ. ಆದರೆ ಅಂಕೋಲಾ ನಗರದ ಇಂದಿನ ಪರಿಸ್ಥಿತಿ ನೋಡಿದರೆ, ಇಲ್ಲಿ ಸಾರ್ವಜನಿಕರ ಜೀವಕ್ಕಿಂತ ಹೆಚ್ಚಾಗಿ ರಸ್ತೆ ಬದಿಯ ಬ್ಯಾನರ್‌ಗಳಿಗೇ ಆದ್ಯತೆ ನೀಡಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ಎದ್ದು ನಿಂತಿರುವ ಈ ಬ್ಯಾನರ್‌ಗಳು ಕೇವಲ ಪ್ರಚಾರದ ಸಾಧನಗಳಲ್ಲ, ಅವುಗಳು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಪಾಲಿಗೆ ಸಂಚಕಾರವಾಗಿ ಪರಿಣಮಿಸಿವೆ. ಇಂದು ನಗರದ ಹೃದಯಭಾಗದಲ್ಲಿ ಸಂಭವಿಸಿದ ರಕ್ತಸಿಕ್ತ ಅಪಘಾತವು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ
.ಕಣ್ಣೆದುರೇ ಮರುಕಳಿಸಿದ ದುರಂತ: ಮಗಳ ಆಕ್ರಂದನಕ್ಕೆ ಕರಗಿತು ನೆರೆದಿದ್ದವರ ಮನ!
ಇಂದು ಬೆಳಿಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ಆಕ್ಸಿಸ್ ಬ್ಯಾಂಕ್ ಮುಂಭಾಗದ ಅಪಾಯಕಾರಿ ತಿರುವಿನಲ್ಲಿ ನಡೆದ ಘಟನೆಯು ನೆರೆದಿದ್ದವರ ಎದೆ ನಡುಗಿಸುವಂತಿತ್ತು. ತಾಯಿ ಮತ್ತು ಮಗಳು ಸ್ಕೂಟಿಯಲ್ಲಿ ಎಂದಿನಂತೆ ತಮ್ಮ ಕೆಲಸಕ್ಕೆ ತೆರಳುತ್ತಿದ್ದರು. ಆದರೆ ರಸ್ತೆಯ ತಿರುವಿನಲ್ಲಿ ಜವಾಬ್ದಾರಿಯಿಲ್ಲದೆ ಅಳವಡಿಸಲಾಗಿದ್ದ ಬೃಹತ್ ಬ್ಯಾನರ್ ಒಂದು ಸವಾರರ ದೃಷ್ಟಿಯನ್ನು ಸಂಪೂರ್ಣವಾಗಿ ಮರೆಮಾಚಿತ್ತು. ಆ ಬ್ಯಾನರ್‌ನಿಂದಾಗಿ ಎದುರಿನಿಂದ ಬರುತ್ತಿದ್ದ ವಾಹನದ ‘ಫೋಕಸ್’ ಅರಿಯಲು ಪ್ರಯತ್ನಿಸುತ್ತಿದ್ದ ಮಹಿಳೆಗೆ, ಹಿಂದಿನಿಂದ ಬರುತ್ತಿದ್ದ ವಾಹನದ ಅಂದಾಜು ಸಿಗದೆ ಭೀಕರ ಡಿಕ್ಕಿ ಸಂಭವಿಸಿತು.
ಕ್ಷಣಾರ್ಧದಲ್ಲಿ ನಡೆದ ಈ ಅವಗಡದಲ್ಲಿ ಮಹಿಳೆ ರಸ್ತೆಯ ಮೇಲೆ ಕುಸಿದು ಬಿದ್ದಿದ್ದು, ತಲೆಯಿಂದ ಅತಿಯಾದ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿ ಮಲಗಿದ್ದರು. ಅತ್ತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿಯನ್ನು ಕಂಡು ಮಗಳು ಅಸಹಾಯಕತೆಯಿಂದ ಚಿರೋಡುತ್ತಿದ್ದ ದೃಶ್ಯ ಮನುಷ್ಯತ್ವ ಇರುವ ಯಾರನ್ನೂ ಕಾಡದೇ ಇರಲಾರದು.
ರಸ್ತೆಯ ಮೇಲೆ ಹರಿಯುತ್ತಿದ್ದ ರಕ್ತ ಮತ್ತು ಆ ಮಗಳ ಆಕ್ರಂದನ ಇಡೀ ಪರಿಸರವನ್ನು ಸ್ತಬ್ಧಗೊಳಿಸಿತ್ತು. ಅದೃಷ್ಟವಶಾತ್, ಸ್ಥಳೀಯ ನಿವಾಸಿ ಚಂದು ನಾಯ್ಕ್ ಅವರು ದೇವದೂತನಂತೆ ಬಂದು ತಕ್ಷಣವೇ ತಮ್ಮ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಒಂದು ಜೀವ ಉಳಿದಿದೆ. ಪ್ರಸ್ತುತ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ರಕ್ತಪಾತಕ್ಕೆ ಕಾರಣವಾದ ಆ ಬ್ಯಾನರ್ ಹಾಕಿದವರು ಮತ್ತು ಅದಕ್ಕೆ ಮೌನ ಸಮ್ಮತಿ ನೀಡಿದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉತ್ತರಿಸುವವರು ಯಾರು?

*ಜವಾಬ್ದಾರಿ ರಹಿತ ಪ್ರಚಾರದ ಅಟ್ಟಹಾಸಕ್ಕೆ ಬ್ರೇಕ್ ಹಾಕುವುದು ಯಾವಾಗ?*
ನಗರದ ಆಡಳಿತವೆಂದರೆ ಕೇವಲ ತೆರಿಗೆ ವಸೂಲಿ ಮಾಡುವುದಲ್ಲ, ನಾಗರಿಕರ ಪ್ರಾಣ ರಕ್ಷಣೆಯೂ ಅದರ ಪರಮೋಚ್ಚ ಕರ್ತವ್ಯ. ಆದರೆ ಅಂಕೋಲಾದ ಪ್ರಸ್ತುತ ಸ್ಥಿತಿ ನೋಡಿದರೆ, ಇಲ್ಲಿ ಸಾರ್ವಜನಿಕರ ಜೀವಕ್ಕಿಂತ ‘ಬ್ಯಾನರ್ ಸಂಸ್ಕೃತಿ’ಯ ರಾಜಕೀಯವೇ ಮೇಲುಗೈ ಸಾಧಿಸಿದಂತೆ ಕಾಣುತ್ತಿದೆ. ಇನ್ನು ಮುಂದಾದರೂ ಪುರಸಭೆಯ ಅಧಿಕಾರಿಗಳು ತಮ್ಮ ಸುದೀರ್ಘ ಮೌನವನ್ನು ಮುರಿದು, ಈ ಬ್ಯಾನರ್ ಹಾವಳಿಗೆ ನಿರ್ದಾಕ್ಷಿಣ್ಯವಾಗಿ ಕಡಿವಾಣ ಹಾಕಬೇಕಿದೆ.
ಪ್ರಮುಖವಾಗಿ, ಪುರಸಭೆಯು ರಸ್ತೆ ಸುರಕ್ಷತೆಯ ಮಾನದಂಡಗಳನ್ನು ಗಾಳಿಗೆ ತೂರದಂತೆ ನಗರದ ಆಯಕಟ್ಟಿನ ಜಾಗಗಳನ್ನು ಮೊದಲೇ ಗುರುತಿಸಿ, ಕೇವಲ ಅಲ್ಲಿ ಮಾತ್ರ ಜಾಹೀರಾತುಗಳಿಗೆ ಅವಕಾಶ ನೀಡಬೇಕು. ರಸ್ತೆ ತಿರುವುಗಳು, ಜನನಿಬಿಡ ಜಂಕ್ಷನ್‌ಗಳು, ವಿದ್ಯುತ್ ಕಂಬಗಳು ಮತ್ತು ಸರ್ಕಾರದ ಅಧಿಕೃತ ಸೂಚನಾ ಫಲಕಗಳನ್ನು ಅತಿಕ್ರಮಿಸಿ ಬ್ಯಾನರ್ ಹಾಕುವ ಧಾರ್ಷ್ಟ್ಯ ತೋರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.ಬ್ಯಾನರ್ ಹಾಕಲು ಅನುಮತಿ ನೀಡುವಾಗಲೇ ಕಟ್ಟುನಿಟ್ಟಾದ ‘ಕಾಲಮಿತಿ’ಯನ್ನು ವಿಧಿಸಬೇಕು.
ಅವಧಿ ಮುಗಿದ ಒಂದೇ ಗಂಟೆಯಲ್ಲಿ ಬ್ಯಾನರ್ ತೆರವಾಗದಿದ್ದರೆ, ಆಯಾ ಸಂಘಟಕರಿಗೆ ಭಾರಿ ಮೊತ್ತದ ದಂಡ ವಿಧಿಸುವುದಲ್ಲದೆ, ಅಂತಹವರನ್ನು ಕಪ್ಪು ಪಟ್ಟಿಗೆ (Blacklist) ಸೇರಿಸುವ ದೃಢ ನಿರ್ಧಾರವನ್ನು ಪುರಸಭೆ ಮಾಡಬೇಕಿದೆ.

ಪ್ರತಿಯೊಂದು ಬ್ಯಾನರ್ ಮೇಲೆಯೂ ಪುರಸಭೆಯ ಅನುಮತಿ ಸಂಖ್ಯೆ ಮತ್ತು ಅವಧಿಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಬೇಕು. ಒಂದು ವೇಳೆ ಅನಧಿಕೃತ ಬ್ಯಾನರ್‌ಗಳಿಂದಾಗಿ ಇಂದು ನಡೆದಂತೆ ರಕ್ತಪಾತಗಳು ಸಂಭವಿಸಿದರೆ, ಕೇವಲ ಬ್ಯಾನರ್ ಹಾಕಿದವರನ್ನಷ್ಟೇ ಅಲ್ಲದೆ, ಕರ್ತವ್ಯಲೋಪ ಎಸಗಿದ ಸಂಬಂಧಪಟ್ಟ ಅಧಿಕಾರಿಗಳನ್ನು ಸಹ ‘ಕೊಲೆ ಯತ್ನ’ದಂತಹ ಗಂಭೀರ ಪ್ರಕರಣದಡಿ ಹೊಣೆಗಾರರನ್ನಾಗಿ ಮಾಡಬೇಕು.
ಆಡಳಿತ ಯಂತ್ರವು ಕೇವಲ ಕಾಗದದ ಮೇಲೆ ನಿಯಮಗಳನ್ನು ಬರೆಯುವುದನ್ನು ಬಿಟ್ಟು, ಅವುಗಳನ್ನು ರಸ್ತೆಯ ಮೇಲೆ ಜಾರಿಗೆ ತಂದಾಗ ಮಾತ್ರ ಇಂತಹ ‘ಮಾನವ ನಿರ್ಮಿತ’ ದುರಂತಗಳಿಗೆ ಮುಕ್ತಿ ಸಿಗಲು ಸಾಧ್ಯ.ಇಂದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಆ ಮಹಿಳೆಯ ಸ್ಥಿತಿ ನಾಳೆ ಮತ್ತೊಬ್ಬರಿಗೆ ಬರಬಾರದು.
ಪ್ರಚಾರದ ಅಮಲಿನಲ್ಲಿ ಅಮಾಯಕರ ರಕ್ತ ಹರಿಸುವ ಈ ಅಪಾಯಕಾರಿ ಪರಂಪರೆಗೆ ಅಂಕೋಲಾದಲ್ಲಿ ತಕ್ಷಣವೇ ಇತಿಶ್ರೀ ಹಾಡಬೇಕಿದೆ. ಪುರಸಭೆಯು ನಗರದಾದ್ಯಂತ ಇರುವ ಎಲ್ಲಾ ಅಪಾಯಕಾರಿ ಫ್ಲೆಕ್ಸ್‌ಗಳನ್ನು ಯುದ್ಧೋಪಾದಿಯಲ್ಲಿ ಕಿತ್ತೆಸೆಯುವ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲಿ.
ವರದಿ :ಕಿರಣ ಗಾಂವಕರ ✍️













Leave a Reply