ಬಿಜೆಪಿ ಪ್ರಶಿಕ್ಷಣ ವರ್ಗದ ಸಮಾರೋಪ: ಸಂಘಟನಾತ್ಮಕ ಶಕ್ತಿ ಪ್ರದರ್ಶನ.
ಅಂಕೋಲಾ:ಭಾರತೀಯ ಜನತಾ ಪಾರ್ಟಿ ಅಂಕೋಲಾ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ “ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026” ರ ಮಂಡಲ ಮಟ್ಟದ ಕಾರ್ಯಕ್ರಮವು ಜುಲೈ 5ರಂದು ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಎರಡು ದಿನಗಳ ಕಾಲ ನಡೆದ ಈ ತರಬೇತಿ ಶಿಬಿರದಲ್ಲಿ ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತ, ಸಂಘಟನಾ ಚಾತುರ್ಯ ಮತ್ತು ಮುಂದಿನ ಗುರಿಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಲಾಯಿತು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಜಿಲ್ಲೆಯ ಪ್ರಮುಖ ನಾಯಕರು ಉಪಸ್ಥಿತರಿದ್ದು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಸಿಂಹದ ಮರಿಗಳಂತೆ ಮುನ್ನುಗ್ಗಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕ್ರಾಂತಿಕಾರಿ ಮಾತುಗಳನ್ನಾಡಿದರು: ”ನಾವು ಕುರಿಮಂದೆಯಲ್ಲಿರುವ ಕುರಿಮರಿಗಳಲ್ಲ, ಬದಲಾಗಿ ಸಿಂಹದ ಮರಿಗಳು ಎಂಬ ಆತ್ಮವಿಶ್ವಾಸ ನಮ್ಮದಾಗಬೇಕು. ಅಲ್ಪಸಲ್ಪ ಆಸೆ-ಆಕಾಂಕ್ಷೆಗಳಿಗೆ ಬಲಿಯಾಗಿ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬಾರದು. ಭಾರತವನ್ನು ಜಗದ್ಗುರು ಸ್ಥಾನದಲ್ಲಿ ನಿಲ್ಲಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಕಾರ್ಯಕರ್ತ ಈ ಪ್ರಶಿಕ್ಷಣ ವರ್ಗದಲ್ಲಿ ಮಾಡಿಕೊಳ್ಳಬೇಕು. 2047ರ ವೇಳೆಗೆ ನಮ್ಮ ದೇಶ ‘ವಿಕಸಿತ ಭಾರತ’ವಾಗುವುದು ನಿಶ್ಚಿತ,” ಎಂದು ಘಂಟಾಘೋಷವಾಗಿ ಸಾರಿದರು.ತರಬೇತಿಯೇ ಸಂಘಟನೆಯ ಜೀವಾಳ: ರೂಪಾಲಿ ನಾಯ್ಕ
ಮಾಜಿ ಶಾಸಕಿ ಶ್ರೀಮತಿ ರೂಪಾಲಿ ನಾಯಕ ರವವು ಮಾತನಾಡಿ, “ಪಕ್ಷದ ಬಲವರ್ಧನೆಗೆ ಕಾರ್ಯಕರ್ತರಿಗೆ ಸೈದ್ಧಾಂತಿಕ ಅರಿವು ಬಹಳ ಮುಖ್ಯ. ಈ ಎರಡು ದಿನಗಳ ಕಾಲ ನಡೆದ ತರಬೇತಿಯು ಸಂಘಟನೆಯ ದೃಷ್ಟಿಯಿಂದ ಮೈಲಿಗಲ್ಲಾಗಲಿದೆ. ಇಲ್ಲಿ ಕಲಿತ ವಿಷಯಗಳು ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಬೆಳವಣಿಗೆಗೆ ಪೂರಕವಾಗಲಿವೆ,” ಎಂದರು.
ಗಣ್ಯರ ಉಪಸ್ಥಿತಿ:ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ, ಅಂಕೋಲಾ ಮಾಜಿ ಮಂಡಲ ಅಧ್ಯಕ್ಷ ಸಂಜಯ್ ನಾಯ್ಕ, ಕಾರವಾರ ಗ್ರಾಮೀಣ ಅಧ್ಯಕ್ಷರಾದ ಸುಭಾಷ್ ಗುನಗಿ, ಓಬಿಸಿ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ ಸೇರಿದಂತೆ ಪ್ರಮುಖರಾದ ನಾಗರಾಜ್ ನಾಯಕ್, ರಾಘು ಭಟ್, ಶ್ರೀಧರ್ ನಾಯ್ಕ ಹಾಗೂ ವಿವಿಧ ಬೂತ್ ಮಟ್ಟದ ಅಧ್ಯಕ್ಷರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.













Leave a Reply