ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯ ಅಧಿಕೃತ ಪತ್ರಿಕಾ ಪ್ರಕಟಣೆ.
ಕಳೆದ ಒಂದೂವರೆ ವರ್ಷಗಳಿಂದ ಕೇಣಿಯ ವಾಣಿಜ್ಯ ಬಂದರು ಯೋಜನೆಯನ್ನು ವಿರೋಧಿಸಿ, ನಮ್ಮ ಮಣ್ಣು, ನೀರು ಮತ್ತು ಬದುಕಿನ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಈ ಐತಿಹಾಸಿಕ ಹೋರಾಟಕ್ಕೆ ನಾಡಿನ ಜನತೆ ಹಾಗೂ ಮಾಧ್ಯಮ ಮಿತ್ರರು ನೀಡುತ್ತಿರುವ ಬೆಂಬಲ ಅಭೂತಪೂರ್ವವಾದುದು. ರೈತರು, ಮೀನುಗಾರರು, ಕೂಲಿ ಕಾರ್ಮಿಕರು ಹಾಗೂ ಸಕಲ ದುಡಿಯುವ ವರ್ಗಗಳ ಸಾಮೂಹಿಕ ನಾಯಕತ್ವದಲ್ಲಿ ಈ ಹೋರಾಟವು ದಿನಾಂಕ 25.11.2024 ರಂದು ಆರಂಭಗೊಂಡು, ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ.
ರಾಜ್ಯದ ಗಡಿ ದಾಟಿ ದೇಶಾದ್ಯಂತ ಪ್ರತಿಧ್ವನಿಸುತ್ತಿರುವ ಈ ಚಳುವಳಿಯು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅತ್ಯಂತ ಪಾರದರ್ಶಕವಾಗಿ ಸಾಗುತ್ತಿದೆ. ಪರಿಸರವಾದಿಗಳು, ಚಿಂತಕರು ಮತ್ತು ಹಗಲಿರುಳು ನಮ್ಮ ಜೊತೆ ನಿಂತ ಸಮಾನ ಮನಸ್ಕರ ಶ್ರಮದ ಫಲವಾಗಿ ಈ ಹೋರಾಟವು ಜಯದ ಹಾದಿಯಲ್ಲಿದೆ. ಆದರೆ, ಇಂತಹ ಪವಿತ್ರವಾದ ಹೋರಾಟಕ್ಕೆ ಮಸಿ ಬಳಿಯುವ ದೃಷ್ಟಿಯಿಂದ ಮತ್ತು ಹೋರಾಟಗಾರರಲ್ಲಿ ಗೊಂದಲ ಸೃಷ್ಟಿಸುವ ಕುತ್ಸಿತ ಮನೋಭಾವದಿಂದ *ರಾಜು ಹರಿಕಂತ್ರ. ಕಣಗಿಲ್* ಎಂಬ ವ್ಯಕ್ತಿಯು ಪತ್ರಿಕೆಗಳಲ್ಲಿ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ಖಂಡನೀಯ ಮತ್ತು ಹತಾಶೆಯ ಪರಮಾವಧಿಯಾಗಿದೆ.
ಈ ವ್ಯಕ್ತಿಯು ನಮ್ಮ ಸಂಘಟನೆಯ ಭಾಗವೇ ಅಲ್ಲದಿದ್ದರೂ, ಸಮಾಜ ಸೇವಕನ ಮುಖವಾಡ ಧರಿಸಿ ಹೋರಾಟದ ದಿಕ್ಕು ತಪ್ಪಿಸಲು ಸಂಚು ರೂಪಿಸುತ್ತಿದ್ದಾನೆ.ದಿನಾಂಕ 29.03.2026 ರಂದು ನಡೆದ ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಚುನಾವಣೆಯಲ್ಲಿ ರಾಜು ಹರಿಕಂತ್ರ ಅವರು ಅನುಭವಿಸಿದ ಹೀನಾಯ ಸೋಲೇ ಈ ಎಲ್ಲಾ ಸುಳ್ಳು ಆರೋಪಗಳಿಗೆ ಮೂಲ ಕಾರಣವಾಗಿದೆ.
ಅಂಕೋಲಾ ತಾಲೂಕಿನ ಏಳು ಸಹಕಾರಿ ಸಂಘಗಳ ಪೈಕಿ ಅವಿರೋಧ ಆಯ್ಕೆಯ ಸಂಪ್ರದಾಯವನ್ನು ಮುರಿದು, ಯಾರ ವಿಶ್ವಾಸವನ್ನೂ ಗಳಿಸದೆ ಸ್ಪರ್ಧಿಸಿದ್ದ ಈತ ಕೇವಲ ಎರಡು ಮತಗಳನ್ನು ಪಡೆದು ಮುಖಭಂಗ ಅನುಭವಿಸಿದ್ದಾನೆ. ನಾವು ಮೊದಲೇ ಮಾತು ಕೊಟ್ಟಂತೆ ಪ್ರಮೋದ್ ಬಾನಾವಳಿಕರ್ ಅವರನ್ನು ಬೆಂಬಲಿಸಿದ್ದಕ್ಕಾಗಿ, ಈ ಸೋಲನ್ನು ಅರಗಿಸಿಕೊಳ್ಳಲಾಗದ ರಾಜು ಅವರು ನಮ್ಮ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಚುನಾವಣೆಗೂ ಮುನ್ನ “ನನಗೆ ಮತ ನೀಡದಿದ್ದರೆ ನಾನು ಜೆ.ಎಸ್.ಡಬ್ಲ್ಯೂ (JSW) ಕಂಪನಿಯೊಂದಿಗೆ ಕೈಜೋಡಿಸಿ ಅವರ ಪರವಾಗಿ ನಿಲ್ಲುತ್ತೇನೆ” ಎಂದು ಫೋನ್ ಮುಖಾಂತರ ಮತ್ತು ಖುದ್ದಾಗಿ ಧಮ್ಕಿ ಹಾಕಿದ್ದ ಇವರ ಕೃತ್ಯವು ಇವರ ನೈಜ ಬಣ್ಣವನ್ನು ಬಯಲು ಮಾಡಿದೆ. ಸ್ವತಃ ಸಂಘದ ಹೆಸರಿನಲ್ಲಿ ಐದು ಲಕ್ಷ ರೂಪಾಯಿ ಸಾಲ ಪಡೆದು, ಅದನ್ನು ಸದಸ್ಯರಿಗೆ ಹಂಚದೆ ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ಈತ, ಚುನಾವಣೆಯ ಸಮಯದಲ್ಲಿ ಒಟ್ಟು ಆರು ಲಕ್ಷದ ಎಪ್ಪತ್ತೊಂದು ಸಾವಿರ ರೂಪಾಯಿಯನ್ನು ದಿಢೀರನೆ ಎಲ್ಲಿಂದ ತಂದು ಪಾವತಿಸಿದ ಎಂಬುದು ಇಡೀ ಮೀನುಗಾರ ಸಮಾಜಕ್ಕೆ ತಿಳಿಯಬೇಕಿದೆ. ಇದು ಕಂಪನಿಗಳ ಜೊತೆ ಇವರು ಮಾಡಿಕೊಂಡ ಗುಪ್ತ ಒಪ್ಪಂದದ ಫಲವೇ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ.
ಇನ್ನು ರಾಷ್ಟ್ರೀಯ ಮೀನುಗಾರರ ಸಂಘಟನೆಯಾದ NFF ಕುರಿತು ಜ್ಞಾನವಿಲ್ಲದೆ ಮಾತನಾಡುತ್ತಿರುವ ರಾಜು ಅವರಿಗೆ ಒಂದು ಮಾತು ಸ್ಪಷ್ಟಪಡಿಸುತ್ತೇವೆ; NFF ನಮ್ಮ ಪಾಲಿನ ತಾಯಿ ಸಂಘಟನೆ ಇದ್ದಂತೆ. ಈ ಸಂಘಟನೆಯ ಆಶ್ರಯದಲ್ಲಿ ನಾವು ಗುಜರಾತ್‌ಗೆ ಪ್ರವಾಸಕ್ಕೆ ಹೋಗಿಲ್ಲ, ಬದಲಾಗಿ ಸಿ.ಆರ್.ಜೆಡ್ (CRZ) ಕಾನೂನುಗಳು ಮತ್ತು ಮೀನುಗಾರರ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಹೋಗಿದ್ದೆವು. ನಾವು ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದಿಲ್ಲ ಅಥವಾ ವಿಮಾನದಲ್ಲಿ ಹಾರಿಲ್ಲ, ಬದಲಾಗಿ ರೈಲಿನ ಸಾಮಾನ್ಯ ಸೀಟಿನಲ್ಲಿ ಪ್ರಯಾಣಿಸಿ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದೆವು. ನೀನು ಕೂಡ ಈ ಕಾರ್ಯಕ್ರಮಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದೆ, ಆದರೆ ನಿನ್ನ ಅಯೋಗ್ಯ ನಡವಳಿಕೆಯಿಂದ ಸಂಘಟನೆಯು ನಿನ್ನನ್ನು ದೂರವಿಟ್ಟಿತು ಎನ್ನುವುದನ್ನು ಮರೆಯಬೇಡ.
ನೀನು ಆರೋಪಿಸುವಂತೆ ನಾವು ಯಾವುದೇ ಉದ್ಯಮಿಗಳಿಂದ ಅಥವಾ ಎನ್.ಜಿ.ಓ (NGO) ಗಳಿಂದ ಹಣ ಪಡೆದಿಲ್ಲ. ನಮ್ಮ ಹೋರಾಟದ ಪ್ರತಿಯೊಂದು ಪೈಸೆ ಕೂಡ ನಮ್ಮೂರಿನ ಪ್ರತಿಯೊಂದು ಮನೆಯವರು ನೀಡಿದ ಬೆವರಿನ ಹಣವಾಗಿದೆ. ಆ ಹಣದ ಲೆಕ್ಕವನ್ನು ನಮ್ಮೂರಿನ ಜನರಿಗೆ ನಾವು ಚಾಚೂತಪ್ಪದೆ ನೀಡುತ್ತಿದ್ದೇವೆ. ಹೋರಾಟದ ಹೆಸರಿನಲ್ಲಿ ಯಾರು ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಮತ್ತು ಯಾರಿಗೆ ಜೆ.ಎಸ್.ಡಬ್ಲ್ಯೂ ಕಂಪನಿಯ ಸಿ.ಇ.ಓ (CEO) ಜೊತೆ ನೇರ ಸಂಪರ್ಕವಿದೆ ಎಂಬುದು ಸಾರ್ವಜನಿಕವಾಗಿ ಬಹಿರಂಗವಾಗಲಿ.
ಅಂಕೋಲಾದಲ್ಲಿ ಜಮೀನು ಅಥವಾ ಮನೆ ಖರೀದಿಸಲು ಯಾರು ಹೊಂಚು ಹಾಕುತ್ತಿದ್ದಾರೆ ಎಂಬ ಸತ್ಯ ನಿನ್ನ ಬಳಿ ಇದ್ದರೆ, ಅದನ್ನು ಸಾಕ್ಷಿ ಸಮೇತ ಸಾಬೀತುಪಡಿಸು ಎಂದು ನಿನಗೆ ನೇರ ಸವಾಲು ಹಾಕುತ್ತಿದ್ದೇವೆ.
ಕೊನೆಯದಾಗಿ, ದಶಮುಖ ರಾವಣನಂತೆ ವಿವಿಧ ಸಂಘಟನೆಗಳಲ್ಲಿ ಅಧಿಕಾರ ಅನುಭವಿಸುತ್ತಿರುವ ರಾಜು ಹರಿಕಂತ್ರ ಅವರಿಗೆ ನಾವು ನಾಲ್ಕು ದಿನಗಳ ಗಡುವು ನೀಡುತ್ತಿದ್ದೇವೆ. ನಿನಗೆ ತಾಕತ್ತಿದ್ದರೆ, ಗಂಡಸ್ತನವಿದ್ದರೆ ನಾವು ಎತ್ತಿರುವ ಪ್ರಶ್ನೆಗಳಿಗೆ ಮತ್ತು ನೀನು ಮಾಡಿರುವ ಆರೋಪಗಳಿಗೆ ಸಾಕ್ಷಿ ಸಮೇತ ನಮ್ಮ ಮುಂದೆ ಬಹಿರಂಗ ಚರ್ಚೆಗೆ ಬರಬೇಕು. ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವಂತೆ ನೀನು ಸತ್ಯವಂತನಂತೆ ನಾಟಕವಾಡಬೇಡ. ಸಾಮೂಹಿಕ ನಾಯಕತ್ವದ ಬಗ್ಗೆ ಮಾತನಾಡುವ ನೀನು, ಕಣಗಿಲ ಸಹಕಾರಿ ಸಂಘದ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿ ಬರುವ ಧೈರ್ಯ ತೋರಿಸು, ಆಗ ಯಾರು ಸಾಚಾ ಎಂಬುದು ತಿಳಿಯುತ್ತದೆ. ಸಾರ್ವಜನಿಕರ ಮುಂದೆ ನೀನು ಬೆತ್ತಲಾಗಿದ್ದೀಯಾ ಮತ್ತು ನಿನ್ನ ಕೆಟ್ಟ ನಾಲಿಗೆಯ ಚಪಲಕ್ಕಾಗಿ ಹೋರಾಟಗಾರರನ್ನು ಕೆಣಕಿದರೆ ಅದರ ಪರಿಣಾಮ ನೆಟ್ಟಗಿರಲಾರದು. ಈ ಸವಾಲನ್ನು ಸ್ವೀಕರಿಸಿ ನೀನು ಚರ್ಚೆಗೆ ಬರದಿದ್ದರೆ, ನೀನು ಒಬ್ಬ ಹೇಡಿ ಮತ್ತು ಸಮಾಜದ ದೃಷ್ಟಿಯಲ್ಲಿ ಅತ್ಯಂತ ಕೀಳು ಮಟ್ಟದ ವ್ಯಕ್ತಿ ಎಂದು ನಾವೇ ಘೋಷಿಸಬೇಕಾಗುತ್ತದೆ. ನಮ್ಮ ಹೋರಾಟವು ಸತ್ಯದ ಹಾದಿಯಲ್ಲಿದೆ, ನಿನ್ನಂತಹ ನೂರು ಮಂದಿ ಬಂದರೂ ಈ ಹೋರಾಟದ ಕಿಚ್ಚನ್ನು ಆರಿಸಲು ಸಾಧ್ಯವಿಲ್ಲ.
ಅಂಕೋಲಾದ ಗುರುಪ್ರಸಾದ್ ಹೋಟೆಲಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಸಂಜೀವ ಬಲೇಗಾರ, ವೆಂಕಟೇಶ್ ಕೆ. ದುರ್ಗೆಕರ್, ಚಂದ್ರಕಾಂತ ಓಮು ಹರಿಕಾಂತ್ರ, ಗೌರೀಶ್ ಪಾಂಡುರಂಗ ಕಾರ್ವಿ, ರಮೇಶ್ ಪಿ. ಕುರ್ಲೆ, ಚಂದ್ರಕಾಂತ್ ಪಿರನಕರ್, ಶಂಕರ್ ಎಸ್. ಬಲೆಗಾರ, ಸರಿತಾ ಎಸ್. ಬಲೆಗಾರ, ನೀಲೇಶ್ ಮೋಹನ್ ಹರಿಕಂತ್ರ, ಕುಮಾರ್ ಗೋವಿಂದ ಹರಿಕಂತ್ರ, ಗಿರೀಶ್ ರೊಂದು ಬಲೆಗಾರ, ಸುಭಾಷ್ ಜಾನು ತಾಂಡೆಲ್, ವೀರೇಶ್ ನುನ್ನು ಹರಿಕಂತ್ರ, ಜಯಂತಿ ವೈ. ದುರ್ಗೇಕರ್ ಹಾಗೂ ಸುಚಿತ್ರ ಮಾರುತಿ ಕೇಣಿಕರ ಉಪಸ್ಥಿತರಿದ್ದರು.”
Leave a Reply