
ಅಂಕೋಲಾ: ತಾಲೂಕಿನ ಸುಂಕಸಾಳ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆ, ಹೆಗ್ಗಾರಿನ ಕಲ್ಪತರು ಸಹಕಾರಿ ಸಂಘ ಹಾಗೂ ಕನಕನಹಳ್ಳಿಯ ಕಿರಾಣಿ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಅನ್ನು ಅಂಕೋಲಾ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.
ಕಳೆದ ಜನವರಿ 12 ರಂದು ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಸುಮೀತ ರಾಧಾಕೃಷ್ಣ ನಾಯ್ಕ ಅವರು ನೀಡಿದ ದೂರಿನನ್ವಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಾರೋ ಅನಾಮಧೇಯ ಕಳ್ಳರು ಜನವರಿ 9 ರಿಂದ 12 ರ ನಡುವಿನ ಅವಧಿಯಲ್ಲಿ ಬ್ಯಾಂಕಿನ ಶೌಚಾಲಯದ ಗೋಡೆ ಹಾಗೂ ಸ್ಟ್ರಾಂಗ್ ರೂಮ್‌ನ ಅರ್ಧ ಗೋಡೆಯನ್ನು ಅತ್ಯಂತ ಚಾಣಾಕ್ಷತನದಿಂದ ಕೊರೆದು ಕಳ್ಳತನಕ್ಕೆ ಯತ್ನಿಸಿದ್ದರು. ಈ ಘಟನೆಯ ಬೆನ್ನಲ್ಲೇ ಹೆಗ್ಗಾರಿನ ಕಲ್ಪತರು ಸಹಕಾರಿ ಸಂಘದಲ್ಲಿ 8,000/- ರೂಪಾಯಿ ಹಾಗೂ ಅನ್ನಪೂರ್ಣ ಮಾರ್ಟ್‌ನಲ್ಲಿ 10,000/- ರೂಪಾಯಿ ನಗದು ಸೇರಿದಂತೆ ಕಿರಾಣಿ ಸಾಮಗ್ರಿಗಳನ್ನು ದೋಚಲಾಗಿತ್ತು. ಈ ಸರಣಿ ಕಳ್ಳತನದ ಪ್ರಕರಣಗಳು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದ್ದವು.ಈ ಗಂಭೀರ ಪ್ರಕರಣವನ್ನು ಭೇದಿಸಲು ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ (CPI) ಶ್ರೀ ಚಂದ್ರಶೇಖರ ಮಠಪತಿ ಅವರ ಸಮರ್ಥ ನೇತೃತ್ವದಲ್ಲಿ ಅತ್ಯಂತ ದಕ್ಷ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಯಿತು. ತನಿಖಾಧಿಕಾರಿಯಾದ ಶ್ರೀ ವಿಶ್ವನಾಥ ನಿಂಗೋಳ್ಳಿ (ಪಿ.ಎಸ್.ಐ. ತನಿಖೆ-01) ಹಾಗೂ ಶ್ರೀ ಗುರುನಾಥ ಹಾದಿಮನಿ (ಪಿ.ಎಸ್.ಐ. ಕಾ&ಸು) ಅವರ ಮಾರ್ಗದರ್ಶನದಲ್ಲಿ, ಸಿಬ್ಬಂದಿಗಳಾದ ಮಹಾದೇವ ಸಿದ್ದಿ, ಪ್ರಶಾಂತ ನಾಯ್ಕ, ಶಿವಾನಂದ ನಾಗರದಿನ್ನಿ, ಆಸಿಪ್ ಆರ್.ಕೆ., ಹೊನ್ನಪ್ಪ ವಗ್ಗಣ್ಣನವರ, ರಯೀಸ ಬಾಗವಾನ ಮತ್ತು ವಿಜಯ ಟಿ. ಅವರು ಹಗಲಿರುಳು ಕಾರ್ಯಾಚರಣೆ ನಡೆಸಿದರು.

ಈ ತಂಡಕ್ಕೆ ಯಲ್ಲಾಪುರ ಠಾಣೆಯ ಮಾರುತಿ ಕೆ.ಎಚ್. ಹಾಗೂ ಜಿಲ್ಲಾ ತಾಂತ್ರಿಕ ಸೆಲ್‌ನ ಉದಯ ಗುನಗಾ ಮತ್ತು ಬಬನ್ ಕದಮ್ ಅವರು ತಾಂತ್ರಿಕ ನೆರವು ನೀಡುವ ಮೂಲಕ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.
ಸಿಪಿಐ ಚಂದ್ರಶೇಖರ ಮಠಪತಿ ಅವರ ಚಾಣಾಕ್ಷ ತಂತ್ರಗಾರಿಕೆಯಿಂದಾಗಿ ತನಿಖಾ ತಂಡವು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು.ದಿನಾಂಕ 01-03-2026 ರಂದು ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಹಳವಳ್ಳಿಯ ವಿನಾಯಕ ಸಿದ್ದಿ (19), ರಾಜೇಶ ಸಿದ್ದಿ (27), ಪ್ರಶಾಂತ ಸಿದ್ದಿ (19), ನಿಲೇಶ ಸಿದ್ದಿ (38) ಹಾಗೂ ನಾಗೇಶ ಸಿದ್ದಿ (24) ಎಂಬ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮೂರು ಮೋಟಾರ್ ಸೈಕಲ್‌ಗಳು (KA-31/EG-0095, KA-31/7346 ಹಾಗೂ ಬಜಾಜ್ ಬೈಕ್) ಮತ್ತು ಒಂದು ‘Acer’ ಕಂಪನಿಯ ಟ್ಯಾಬ್ ಸೇರಿದಂತೆ ಕಳ್ಳತನಕ್ಕೆ ಬಳಸುತ್ತಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅತ್ಯಂತ ಸಂಕೀರ್ಣವಾಗಿದ್ದ ಈ ಕಳ್ಳತನದ ಜಾಲವನ್ನು ಯಶಸ್ವಿಯಾಗಿ ಭೇದಿಸಿದ ಸಿಪಿಐ ಚಂದ್ರಶೇಖರ ಮಠಪತಿ ಮತ್ತು ಅವರ ಇಡೀ ತಂಡದ ಸಾಹಸವನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ದೀಪನ್ ಎಮ್.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಬಿ. ಹಾಗೂ ಕಾರವಾರದ ಡಿವೈಎಸ್ಪಿ ಶ್ರೀ ಗಿರೀಶ ಎಸ್.ವಿ. ಅವರು ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Leave a Reply