ಪಿಡಿಒ ಮೇಲಿನ ಹಲ್ಲೆ ಖಂಡನೀಯ: ಆರೋಪಿಯ ಬಂಧನಕ್ಕೆ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ್ ಆಗ್ರಹ,
ಸಿದ್ದಾಪುರ: ಶಿರಳಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ ಆರ್. ನಾಯ್ಕ ಅವರ ಮೇಲೆ ನಡೆದ ದೈಹಿಕ ಹಲ್ಲೆ ಮತ್ತು ಕೊಲೆ ಬೆದರಿಕೆ ಪ್ರಕರಣವನ್ನು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಗಿರೀಶ್ ನಾಯಕ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಸರ್ಕಾರಿ ಕರ್ತವ್ಯದಲ್ಲಿದ್ದ ಅಧಿಕಾರಿಯ ಮೇಲೆ ನಡೆದ ಈ ದೌರ್ಜನ್ಯವು ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದ್ದು, ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸಿದ್ದಾಪುರ ತಾಲೂಕು ಘಟಕದ ವತಿಯಿಂದ ಈಗಾಗಲೇ ತಹಶೀಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಲಾಗಿದ್ದು, ಈ ಗಂಭೀರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಅನಿವಾರ್ಯವಾಗಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಮಾರ್ಚ್ 31ರಂದು ನಡೆದ ಈ ಘಟನೆಯಲ್ಲಿ, ವಡಗೇರಿಯ ಪ್ರಭು ದೊಡ್ಮನಿ ಎಂಬಾತನು ತನ್ನ ಪತ್ನಿಯ ಉದ್ಯಮ ಪರವಾನಿಗೆ ಅರ್ಜಿಯ ವಿಚಾರವಾಗಿ ಕಚೇರಿಗೆ ಬಂದು ಗಲಾಟೆ ಮಾಡಿದ್ದಾನೆ. ಅರ್ಜಿಯಲ್ಲಿನ ಅಸ್ಪಷ್ಟ ಮಾಹಿತಿಯನ್ನು ಸರಿಪಡಿಸಲು ಪಿಡಿಒ ಸೂಚಿಸಿದ್ದಕ್ಕೆ ಕೆರಳಿದ ಆರೋಪಿಯು, ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಊಟಕ್ಕೆ ತೆರಳುತ್ತಿದ್ದಾಗ ತಡೆದು ಮೈಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, “ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿ 115(2), 126(2), 132 ಸೇರಿದಂತೆ ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಾಗಿದ್ದು, ಸಂಘಟನೆಯು ಈಗ ಆರೋಪಿಯ ಬಂಧನಕ್ಕಾಗಿ ಪಟ್ಟು ಹಿಡಿದಿದೆ.





Leave a Reply